ಪ್ರಯಾಣಿಕರ ಗುರುತಿನ ಚೀಟಿಯಾಗಿ ಮೊಬೈಲ್ ಆಧಾರ್ ಪರಿಗಣನೆ: ರೈಲ್ವೇ ಇಲಾಖೆ

ಡಿಜಿಟಲ್ ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಪರಿಗಣಿಸಬೇಕು ಎಂಬ ಗ್ರಾಹಕರ ಬಹುದಿನಗಳ ಒತ್ತಾಯಕ್ಕೆ ಕೊನೆಗೂ ರೈಲ್ವೇ ಇಲಾಖೆ ಮಣಿದಿದ್ದು, ಮೊಬೈಲ್ ಆಧಾರ್ ಅನ್ನು ಪ್ರಯಾಣಿಕರ ಗುರುತಿನ ಚೀಟಿಯಾಗಿ ಪರಿಗಣಿಸುವುದಾಗಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಡಿಜಿಟಲ್ ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಪರಿಗಣಿಸಬೇಕು ಎಂಬ ಗ್ರಾಹಕರ ಬಹುದಿನಗಳ ಒತ್ತಾಯಕ್ಕೆ ಕೊನೆಗೂ ರೈಲ್ವೇ ಇಲಾಖೆ ಮಣಿದಿದ್ದು, ಮೊಬೈಲ್ ಆಧಾರ್ ಅನ್ನು ಪ್ರಯಾಣಿಕರ ಗುರುತಿನ  ಚೀಟಿಯಾಗಿ ಪರಿಗಣಿಸುವುದಾಗಿ ಹೇಳಿದೆ.
ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಹಿಂದೆ ಮೊಬೈಲ್ ಅಧಾರ್ ಅಥವಾ ಎಂ-ಆಧಾರ್ ಆ್ಯಪ್ ಅನ್ನು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಬಿಡುಗಡೆ ಮಾಡಿತ್ತು. ಈ  ವಿಶಿಷ್ಟ ಆ್ಯಪ್ ನಲ್ಲಿ ವ್ಯಕ್ತಿಯು ಲಾಗಿನ್ ಆಗುವ ಮೂಲಕ ತನ್ನ ಆಧಾರ್ ಗುರುತಿನ ಚೀಟಿಯ ಡಿಜಿಟಲ್ ವರ್ಷನ್ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಯಾವ ವ್ಯಕ್ತಿಯ ಮೊಬೈಲ್ ನಂಬರ್ ಆಧಾರ್ ಗೆ  ಜೋಡಣೆಯಾಗಿರುತ್ತದೆಯೋ ಆ ನಂಬರಿನ ಮೊಬೈಲ್ ಮೂಲಕ ಮಾತ್ರ ಆಧಾರ್ ನ ಡಿಜಿಟಲ್ ವರ್ಷನ್ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಇನ್ನು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ತಮ್ಮ ಗುರುತಿನ ಚೀಟಿ ಪ್ರದರ್ಶಿಸಲು ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ನಲ್ಲಿ ಈ ಎಂ-ಆಧಾರ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಬಳಿಕ ಅದರೊಳಗೆ  ಲಾಗಿನ್ ಆಗಿ ಅಧಿಕಾರಿಗಳಿಗೆ ತಮ್ಮ ಡಿಜಿಟಲ್ ವರ್ಷನ್ ನ ಆಧಾರ್ ಪ್ರತಿಯನ್ನು ತೋರಿಸಬಹುದಾಗಿದೆ. ಅಧಿಕಾರಿಗಳೂ ಕೂಡ ಡಿಜಿಟಲ್ ವರ್ಷನ್ ಆಧಾರ್ ಕಾರ್ಡ್ ಅನ್ನು ಅಧಿಕೃತ ಗುರುತಿನ ಚೀಟಿ ಎಂದು ಪರಿಗಣಿಸಬೇಕು  ಎಂದು ರೈಲ್ವೇ ಇಲಾಖೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಪ್ರಸ್ತುತ ಆಧಾರ್ ಪ್ರಾಧಿಕಾರ ಬಿಡುಗಡೆ ಮಾಡಿರುವ ಎಂ-ಆಧಾರ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮಾತ್ರ ಲಭ್ಯವಿದೆ. ಹೀಗಾಗಿ ಆ್ಯಂಡ್ರಾಯ್ಡ್ ಗ್ರಾಹಕರು ಮಾತ್ರ ಈ ಸೇವೆ ಉಪಯೋಗಿಸಬಹುದಾಗಿದ್ದು, ಮುಂದಿನ ದಿನಗಳಲ್ಲಿ  ಐಫೋನ್ ಗ್ರಾಹಕರಿಗೂ ಆ್ಯಪ್ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಇಲಾಖೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com