ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭಾರತದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆ ಬಗ್ಗೆ ತಿಳಿಯಲೇ ಬೇಕಾದ ಅಂಶಗಳು!

ಭಾರತದ ರೈಲ್ವೇ ಸಾರಿಗೆ ವ್ಯವಸ್ಥೆಯ ದಿಕ್ಕನ್ನೇ ಬದಲಿಸಲಿದೆ ಎಂದು ಹೇಳಲಾಗುತ್ತಿರುವ ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಗುರುವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅಹ್ಮದಾಬಾದ್: ಭಾರತದ ರೈಲ್ವೇ ಸಾರಿಗೆ ವ್ಯವಸ್ಥೆಯ ದಿಕ್ಕನ್ನೇ ಬದಲಿಸಲಿದೆ ಎಂದು ಹೇಳಲಾಗುತ್ತಿರುವ ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಗುರುವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್  ಪ್ರಧಾನಿ ಶಿಂಜೋ ಅಬೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬುಲೆಟ್ ರೈಲು ಯೋಜನೆಗೆ ತಾಂತ್ರಿಕ ನೆರವು ನೀಡುವುದಷ್ಟೇ ಅಲ್ಲದೇ ಆರ್ಥಿಕವಾಗಿಯೂ ಜಪಾನ್ ಭಾರತಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಯೋಜನೆಯ ಶೇ.81ರಷ್ಟು ಹಣವನ್ನು ತಾನೇ ಸಾಲವಾಗಿ ನೀಡುತ್ತಿದೆ. ಹೀಗಾಗಿ ಈ  ಮಹತ್ವದ ಯೋಜನೆಯನ್ನು ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಪರ್ಯಾಯ ಎಂದು ಹೇಳಲಾಗುತ್ತಿದ್ದು, ಫ್ರೀಡಮ್ ಕಾರಿಡಾರ್ ಅನುಷ್ಠಾನ ಹಾಗೂ ಭಾರತ-ಜಪಾನ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ  ಸಂಬಂಧಿಸಿದ 8 ಮಹತ್ವದ ಒಡಂಬಡಿಕೆಗಳಿಗೂ ಸಹಿಹಾಕಲಾಗುತ್ತಿದೆ.

ಇನ್ನು ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.
ಭಾರತದ ಮೊಟ್ಟ ಮೊದಲ ಬುಲೆಟ್ ರೈಲಿನ ವೆಚ್ಚ 1.10 ಲಕ್ಷ ಕೋಟಿಯಾಗಿದೆ. ಈ ಪೈಕಿ ಶೇ.81ರಷ್ಟು ಹಣವನ್ನು ಅಂದರೆ ಸುಮಾರು 88 ಸಾವಿರ ಕೋಟಿಯನ್ನು ಯೋಜನೆಗೆ ತಾಂತ್ರಿಕ ನೆರವು ನೀಡುತ್ತಿರುವ ಜಪಾನ್ ಸರ್ಕಾರವೇ  ಭರಿಸಲಿದೆ. ಭಾರತಕ್ಕೆ ನೀಡುವ ಈ ಸಾಲಕ್ಕೆ ಜಪಾನ್ ಸರ್ಕಾರ ವಿಶ್ವ ಬ್ಯಾಂಕ್ ಗಿಂತಲೂ ಅತ್ಯಂತ ಕಡಿಮೆ ಬಡ್ಡಿ ದರ ಅಂದರೆ ಶೇ.01ರಷ್ಟು ಬಡ್ಡಿದರ ವಿಧಿಸಲಿದೆ. ಅಲ್ಲದೆ ಈ ಸಾಲಕ್ಕೆ ವಿಶ್ವಬ್ಯಾಂಕ್ ಗಿಂತಲೂ ಹೆಚ್ಚುವರಿ  ಕಾಲಮಿತಿಯನ್ನು ನೀಡಿದ್ದು, 50 ವರ್ಷಗಳಲ್ಲಿ ಸಾಲ ತೀರಿಸಲು ಯೋಜನೆಗೆ ಸಹಿ ಹಾಕಲಾಗಿದೆ.

ಇನ್ನು ಬೃಹತ್ ಯೋಜನೆಯ ರೈಲ್ವೇ ಕಾರಿಡಾರ್ ಮುಂಬೈ ನಿಂದ ಅಹಮದಾಬಾದ್ ವರೆಗೆ ಒಟ್ಟು 509 ಕಿ,ಮೀ ಉದ್ಧವಿದ್ದು, ಈ ಪೈಕಿ ಸಮುದ್ರದೊಳಗೆ ನಿರ್ವಿುಸಲಾಗುವ 7 ಕಿ.ಮೀ ಸುರಂಗ ಮಾರ್ಗವನ್ನು ಒಳಗೊಂಡಿದೆ. ಇದಲ್ಲದೆ  21 ಕಿ.ಮೀ ಸುರಂಗ ಮಾರ್ಗವನ್ನು ಈ ಯೋಜನೆ ಒಳಗೊಂಡಿದೆ. ಇನ್ನುಳಿದಂತೆ 156 ಕಿ.ಮೀ. ಮಹಾರಾಷ್ಟ್ರದಲ್ಲಿ, 351 ಕಿ.ಮೀ. ಗುಜರಾತ್ ನಲ್ಲಿ, 2 ಕಿ.ಮೀ. ಡಿ-ಎನ್ ಹವೇಲಿ (ಕೇಂದ್ರಾಡಳಿತ ಪ್ರದೇಶ), 21 ಕಿ.ಮೀ-ಬಿಕೆಸಿ -ಥಾಣೆ  (ಸುರಂಗ ಮಾರ್ಗ) ಮತ್ತು 7 ಕಿ.ಮೀ. ಥಾಣೆ ಕ್ರೀಕ್- ವಿರಾರ್ (ಆಳಸಮುದ್ರ ಸುರಂಗ) ಮೂಲಕ ಈ ಯೋಜನೆ ಹಳಿಗಳು ಹಾದುಹೋಗಲಿವೆ.

ಈ ಬುಲೆಟ್ ರೈಲು ಒಟ್ಟು 10 ಬೋಗಿಗಳನ್ನು ಹೊಂದಿರಲಿದ್ದು, ಒಟ್ಟು 12 ರೈಲು ನಿಲ್ದಾಣಗಳನ್ನು ಹೊಂದಲಿದೆ. ಬೋಗಿಗಳು 750 ಆಸನಗಳನ್ನು ಹೊಂದಿರಲಿದ್ದು, ಅಹ್ಮದಾಬಾದ್ ನಿಂದ ಮುಂಬೈ ಕೇವಲ 2.58 ಗಂಟೆ ಅವಧಿಯಲ್ಲಿ  ಸಂಚರಿಸಲಿದೆ. ನಿಲುಗಡೆ ರಹಿತವಾಗಿ ಅಹ್ಮದಾಬ್ ನಿಂದ ಮುಂಬೈ ಈ ರೈಲು ಕೇವಲ 2 ಗಂಟೆಯಲ್ಲಿ ಸಂಚರಿಸಲಿದ್ದು, ನಿಲುಗಡೆ ಸಹಿತ ಅಂದರೆ ಈ ಮಾರ್ಗದಲ್ಲಿ ಬರುವ 12 ರೈಲು ನಿಲ್ದಾಣಗಳಲ್ಲಿ ರೈಲು ನಿಂತು ಸಾಗಲು 2.58  ಗಂಟೆ ಅವಧಿ ತಗುಲುತ್ತದೆ ಎಂದು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

2022ಕ್ಕೆ ಹಳಿ ನಿರ್ಮಾಣ ಪೂರ್ಣ ಸಾಧ್ಯತೆ
2023ರಲ್ಲಿ ಬುಲೆಟ್ ರೈಲು ಯೋಜನೆ ಪೂರ್ಣಗೊಳಿಸುವುದಕ್ಕಾಗಿ 2019ರಲ್ಲೇ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ 2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷವಾಗುವುದರಿಂದ ಅದೇ ವರ್ಷ ರೈಲನ್ನು ಹಳಿ  ಮೇಲೆ ತರುವುದಕ್ಕಾಗಿ ಒಂದು ವರ್ಷದ ಮೊದಲೇ ಕಾಮಗಾರಿ ಆರಂಭಿಸಲಾಗುತ್ತಿದೆ.

ಬುಲೆಟ್ ರೈಲು ಯೋಜನೆ ಮೂಲಕ 40 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿ
ಇನ್ನು ಭಾರತ ಮತ್ತು ಜಪಾನ್ ದೇಶಗಳ ಸ್ನೇಹದ ಪ್ರತೀಕವಾಗಿರುವ ಈ ಹೈಸ್ಪೀಡ್ ಬುಲೆಟ್ ರೈಲು ಯೋಜನೆಯಿಂದಾಗಿ ನೇರವಾಗಿ ಮತ್ತು ಪರೋಕ್ಷವಾಗಿ ಸುಮಾರು 40 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು  ಅಂದಾಜಿಸಲಾಗಿದೆ. ಈ ಪೈಕಿ ನಿರ್ಮಾಣ ಕ್ಷೇತ್ರದಲ್ಲಿ ಸುಮಾರು 20,000 ಉದ್ಯೋಗ, ನಿರ್ವಹಣಾ ಕ್ಷೇತ್ರದ್ಲ್ಲಿ 4 ಸಾವಿರ ಉದ್ಯೋಗ ಹಾಗೂ 2 ಸಾವಿರ ಉದ್ಯೋಗಗಳು ವಿವಿಧ ಪರೋಕ್ಷ ಘಟಕಗಳಲ್ಲಿ ಸೃಷ್ಟಿಯಾಗಲಿದೆ ಎಂದು  ಅಂದಾಜಿಸಲಾಗಿದೆ.

ಪ್ರಯಾಣಿಕರಿಗೆ ತಗುಲುವ ವೆಚ್ಚ ಎಷ್ಟು?
ಈ ಬುಲೆಟ್ ರೈಲಿನ ಪ್ರಯಾಣಕ್ಕೆ ಸುಮಾರು 1750 ರು. ವೆಚ್ಚವಾಗುವ ಸಾಧ್ಯತೆ ಇದೆ. ತಜ್ಞರು ಹೇಳಿರುವಂತೆ ಪ್ರತೀ 300 ಕಿ.ಮೀ ಪ್ರಯಾಣಕ್ಕೆ ಸುಮಾರು 1500 ರು. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com