ಕಟಕ್: ವೈದ್ಯರ ನಿರ್ಲಕ್ಷ್ಯದಿಂದಾಗಿ ಗರ್ಭಿಣಿಯೊಬ್ಬರು ಆಸ್ಪತ್ರೆಯ ವೆರಾಂಡದಲ್ಲೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಕಟಕ್ ನಲ್ಲಿ ನಡೆದಿದೆ.
ದಾಗರ್ ಪದ ಮೂಲದ ಗುಲ್ಸನ್ ಬಿಬಿ ಎಂಬಾಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ನಾದಿನಿ ಸಬೀನಾ ಬೇಗಂ ಬೆಳಗ್ಗೆ 7.30 ರ ವೇಳೆಗೆ ಕಟಕ್ ನ ಸಿಟಿ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಆಸ್ಪತ್ರೆಗೆ ಕರೆತಂದ ವೇಳೆ ಅಲ್ಟ್ರಾ ಸೌಂಡ್ ಗೆ 1 ಸಾವಿರ ರು ಹಣ ಪಾವತಿಸುವಂತೆ ವೈದ್ಯರು ಬೇಡಿಕೆ ಇಟ್ಟಿದ್ದಾರೆ. ಆದರೆ ಪಾವತಿಸಲು ಅಷ್ಟು ಹಣ ತನ್ನಲ್ಲಿಲ್ಲ ಎಂಬುದಾಗಿ ಆಕೆ ತಿಳಿಸಿದಾಗ ಹೊರಗೆ ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿಸುವಂತೆ ಹೇಳಿದ್ದಾರೆ.
ನಂತರ ಹಣ ಹೊಂದಿಸಿದ ಸಬೀನಾ ಹೊರಗಿನ ಖಾಸಗಿ ಕೇಂದ್ರದಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿಸಿದ್ದಾರೆ, ಇದಾದ ನಂತರ ವರದಿಯನ್ನು ವೈದ್ಯರ ಬಳಿ ನೀಡಿದ್ದಾರೆ, ವರದಿ ಪರಿಶೀಲಿಸಿದ ವೈದ್ಯರು ಆಕೆಗೆ ಸೀಸೆರಿಯನ್ ಮಾಡಬೇಕಿದ್ದು ಆಕೆಯನ್ನು ಶಿಫ್ಟ್ ಮಾಡಿಸುವಂತೆ ಹೇಳಿದ್ದಾರೆ.
ವೈದ್ಯರು ಆಕೆಗೆ ಚಿಕಿತ್ಸೆ ನೀಡದ ಕಾರಣ ಸತತ 4 ಗಂಟೆಯ ನೋವಿನ ನಂತರ ಬೆಳಗ್ಗೆ 11.30 ಕ್ಕೆ ಗುಲ್ಸನ್ ಹೆಣ್ಣುಮಗುವಿಗೆ ಆಸ್ಪತ್ರೆಯ ವರಾಂಡದಲ್ಲಿ ಜನ್ಮ ನೀಡಿದ್ದಾರೆ ಎಂದು ಸಬೀನಾ ಆರೋಪಿಸಿದ್ದಾಳೆ.
ನಂತರ ಆಸ್ಪತ್ರೆ ವೈದ್ಯರ ವಿರುದ್ಧ ಮಹಿಳೆಯ ಸಂಬಂಧಿಕರು ಪ್ರತಿಭಟನೆ ನಡೆಸಿದರು, ನಂತರ ಆಸ್ಪತ್ರೆಯ ಸಿಬ್ಬಂದಿ ನವಜಾತ ಶಿಶು ಮತ್ತು ತಾಯಿಗೆ ಚಿಕಿತ್ಸೆ ನೀಡಿದ್ದಾರೆ. ಕಟಕ್ ಮುಖ್ಯ ಆರೋಗ್ಯಾಧಿಕಾರಿ ಈ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ.