ಆಶ್ರಮದ ಮೂಲಗಳ ಪ್ರಕಾರ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆಶ್ರಮದ ಪದಾಧಿಕಾರಿ ಪ್ರದೀಪ್ ಗೋಯಲ್ ಇನ್ಸಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪಂಚಕುಲ ಹಿಂಸಾಚಾರ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಹರ್ಯಾಣ ವಿಶೇಷ ತನಿಖಾ ದಳದ ಅಧಿಕಾರಿಗಳು ಇಂದು ರಾಜಸ್ತಾನದ ಉದಯ್ ಪುರದಲ್ಲಿ ಗೋಯಲ್ ರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಇದಲ್ಲದೆ ಡೇರಾ ಸಚ್ಚಾ ಸೌಧ ಆಶ್ರಮದ ವಕ್ತಾರ ಆದಿತ್ಯಾ ಇನ್ಸಾನ್ ಸಂಬಂಧಿ ಪ್ರಕಾಶ್ ಅಲಿಯಾಸ್ ವಿಕ್ಕಿ ಎಂಬಾತನನ್ನು ಮೊಹಾಲಿಯಲ್ಲಿ ಬಂಧಿಸಲಾಗಿದೆ ಎಂದು ಪಂಚಕುಲ ಉಪ ಪೊಲೀಸ್ ಆಯುಕ್ತ ಮನ್ಬೀರ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ. ಇದೇ ಪ್ರಕರಣ ಸಂಬಂಧ ನಿನ್ನೆಯಷ್ಟೇ ವಿಜಯ್ ಎಂಬ ವ್ಯಕ್ತಿಯನ್ನು ಪಿನ್ಜೊರೆಯಲ್ಲಿ ಬಂಧಿಸಲಾಗಿತ್ತು. ಅಲ್ಲದೆ ಪ್ರಕರಣ ಸಂಬಂಧ ಪ್ರದೀಪ್, ಪ್ರಕಾಶ್ ಮತ್ತು ವಿಜಯ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಂಚಕುಲದಲ್ಲಿ ಸಂಭವಿಸಿದ ಹಿಂಸಾಚಾರ ಕುರಿತಂತೆ ಈಗಾಗಲೇ ಸಾಕ್ಷ್ಯಾಧಾರಗಳು ಹಾಗೂ ವಿಡಿಯೋಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ವಿಡಿಯೋದಲ್ಲಿ ಕಂಡುಬಂದ ಆರೋಪಿಗಳ ಗುರುತಿಸಲಾಗುತ್ತಿದೆ ಎಂದು ಗೋಯಲ್ ತಿಳಿಸಿದ್ದಾರೆ.
ಹನಿಪ್ರೀತ್ ಗಾಗಿ ಮುಂದುವರೆದ ಶೋಧ
ಇದೇ ವೇಳೆ ಹನಿಪ್ರೀತ್ ಕುರಿತ ಪ್ರಶ್ನೆಗೆ ಉತ್ತರಿಸಿರುವ ಬಂಧಿತ ಗೋಯಲ್, ಹನಿಪ್ರೀತ್ ನೇಪಾಳಕ್ಕೆ ಪರಾರಿಯಾಗಿಲ್ಲ. ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇತ್ತ ತಲೆಮರೆಸಿಕೊಂಡಿರುವ ಆಕೆಯನ್ನು ಬಂಧಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದು, ಇದಕ್ಕಾಗಿ ಪಂಚಕುಲ ಪೊಲೀಸರು ಪ್ರತ್ಯೇಕ ತಂಡವನ್ನೇ ರಚಿಸಿದ್ದಾರೆ ಎಂದು ತಿಳಿದುಬಂದಿದೆ. ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಬಳಿಕ ರಾಮ್ ರಹೀಮ್ ಸಿಂಗ್ ನನ್ನು ಬಂಧನಕ್ಕೊಳಪಡಿಸಲಾಗಿತ್ತು. ಬಂಧನದ ವೇಳೆ ಆತನನ್ನು ಅಪಹರಣ ಮಾಡಲು ರೂಪಿಸಿದ್ದ ಯೋಜನೆಯಲ್ಲಿ ಹನಿಪ್ರೀತ್ ಕೈವಾಡ ಕೂಡ ಇತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಆಕೆಯ ಮೇಲೆ ಪ್ರಕರಣ ದಾಖಲಾಗಿತ್ತು. ಸೆ.1 ರಂದು ಹನಿಪ್ರೀತ್ ವಿರುದ್ಧ ಹರಿಯಾಣ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಇದಾದ ಬಳಿಕ ಹನಿಪ್ರೀತ್ ತಲೆಮರೆಸಿಕೊಂಡಿದ್ದು, ಇನ್ನೂ ಆಕೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿಲ್ಲ.