ಇನ್ನೂ ಐದು ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆಗಳು ನಿರ್ಮಾಣವಾಗಲಿದ್ದು, ಈ ಪೈಕಿ ಎರಡನೇ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಖಂಡೇರಿ ಇದೇ ಡಿಸೆಂಬರ್ ಅಂತ್ಯದೊಳಗೆ ನೌಕಾಪಡೆ ಸೇರಲಿದೆ. ಅಂತೆಯೇ ಮುಂದಿನ ವರ್ಷ ಐಎನ್‌ಎಸ್ ಕಾರಂಜ್ ನೌಕಾಪಡೆ ಸೇರುವ ಸಾಧ್ಯತೆ ಇದ್ದು, ಉಳಿದೆಲ್ಲಾ ನೌಕೆಗಳು 2020ರೊಳಗೆ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರಸಕ್ತ ದೇಶದ ನೌಕಾಪಡೆಯಲ್ಲಿ 13 ಡೀಸೆಲ್-ವಿದ್ಯುತ್ ಚಾಲಿತ ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆಗಳಿದ್ದು, ಇವುಗಳಲ್ಲಿ ಕೇವಲ ಅರ್ಧದಷ್ಟು ನೌಕೆಗಳು ಮಾತ್ರ ಯಾವುದೇ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಲು ಯೋಗ್ಯವಾಗಿದೆ. ಪ್ರಸ್ತುತ ಸೇನೆ ಸೇರ್ಪಡೆಗೊಂಡಿರುವ ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆ ಯಾವುದೇ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸಬಲ್ಲ ನೌಕೆಯಾಗಿದ್ದು, ಇದೇ ಕಾರಣಕ್ಕೆ ಸ್ಕಾರ್ಪಿಯನ್ ಯೋಜನೆಗೆ ಕೇಂದ್ರ ಸರ್ಕಾರ ಅತ್ಯಂತ ಹೆಚ್ಚು ಸಮಯ ಮತ್ತು ಹಣವನ್ನು ವ್ಯಯಿಸಿದೆ.
ಗುರುವಾರ ಸೇನೆಗೆ ಸೇರ್ಪಡೆಯಾಗಿರುವ ಐಎನ್‌ಎಸ್ ಕಲ್ವಾರಿ 2012ರಲ್ಲೇ ತಯಾರಾಗಬೇಕಿತ್ತು. ಅಲ್ಲದೇ 2017ರೊಳಗೆ ಉಳಿದ ಐದು ಜಲಾಂತರ್ಗಾಮಿ ನೌಕೆಗಳು ಸೇನೆ ಸೇರಬೇಕಿತ್ತು. ಕಾರಣಾಂತರಗಳಿಂದಾಗಿ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಕಾರ್ಯ ನಿಧಾನಗತಿಯಾಗಿತ್ತು. ಅಲ್ಲದೆ ಈ ಹಿಂದೆ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಸೋರಿಕೆಯಾದ ಕುರಿತು ವಿಕಿಲೀಕ್ಸ್ ವರದಿ ಪ್ರಸಾರ ಮಾಡಿತ್ತು. ಅಲ್ಲದೆ ಈ ಸಂಬಂಧ ಜಲಾಂತರ್ಗಾಮಿಯ ಸೂಕ್ಷ್ಮ ಭದ್ರತಾ ಅಂಶಗಳ ಕುರಿತು ವರದಿ ಮಾಡಿತ್ತು. ಇದೇ ಕಾರಣಕ್ಕೆ ಜಲಾಂತರ್ಗಾಮಿಯಲ್ಲಿ ಕೆಲ ತಾಂತ್ರಿಕ ಬದಲಾವಣೆ ಮಾಡಿಕೊಳ್ಳುವ ಸಲುವಾಗಿ ನಿರ್ಮಾಣ ಕಾರ್ಯ ವಿಳಂಬ ಮಾಡಲಾಗಿತ್ತು ಎಂದು ಹೇಳಲಾಗಿದೆ.