500 ಕೋಟಿ ಅಕ್ರಮ ಆಸ್ತಿ ಹೊಂದಿದ್ದ ಆಂಧ್ರ ಪ್ರದೇಶ ಮುನ್ಸಿಪಲ್ ಅಧಿಕಾರಿ ಬಂಧನ!

ಆಂಧ್ರ ಪ್ರದೇಶದ ಮುನ್ಸಿಪಲ್ ಅಧಿಕಾರಿಯೊಬ್ಬರು ಬರೊಬ್ಬರಿ 500 ಕೋಟಿ ಅಕ್ರಮ ಆಸ್ತಿ ಹೊಂದಿದ ಆರೋಪದ ಮೇರೆಗೆ ಬಂಧನಕ್ಕೀಡಾಗಿದ್ದು, ಅವರ ನಿವೃತ್ತಿಗೆ ಕೇವಲ 3 ದಿನ ಬಾಕಿ ಇರುವಂತೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಬಂಧನಕ್ಕೀಡಾದ ಅಧಿಕಾರಿ ರಘುರಾಮಿ ರೆಡ್ಡಿ
ಬಂಧನಕ್ಕೀಡಾದ ಅಧಿಕಾರಿ ರಘುರಾಮಿ ರೆಡ್ಡಿ
ವಿಶಾಖಪಟ್ಟಣ: ಆಂಧ್ರ ಪ್ರದೇಶದ ಮುನ್ಸಿಪಲ್ ಅಧಿಕಾರಿಯೊಬ್ಬರು ಬರೊಬ್ಬರಿ 500 ಕೋಟಿ ಅಕ್ರಮ ಆಸ್ತಿ ಹೊಂದಿದ ಆರೋಪದ ಮೇರೆಗೆ ಬಂಧನಕ್ಕೀಡಾಗಿದ್ದು, ಅವರ ನಿವೃತ್ತಿಗೆ ಕೇವಲ 3 ದಿನ ಬಾಕಿ ಇರುವಂತೆ ಎಸಿಬಿ  ಅಧಿಕಾರಿಗಳು ಶಾಕ್ ನೀಡಿದ್ದಾರೆ.
ವಿಶಾಖ ಪಟ್ಟಣದ ನಗರಸಭೆಯ ನಗರ ಯೋಜನೆ ವಿಭಾಗ ನಿರ್ದೇಶಕ ಗೊಲ್ಲ ವೆಂಕಟ ರಘುರಾಮಿ ರೆಡ್ಡಿ ಎಂಬುವವರನ್ನು ನಿನ್ನೆ ರಾತ್ರಿ ಆಂಧ್ರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು  ಹಿಂದೂಸ್ತಾನ ಟೈಮ್ಸ್ ವರದಿ ಮಾಡಿವೆ. ವರದಿಯಲ್ಲಿರುವಂತೆ ಅಧಿಕಾರಿ ರಘುರಾಮಿ ರೆಡ್ಡಿ ಅವರು ಭಾರಿ ಪ್ರಮಾಣದಲ್ಲಿ ಆದಾಯ ಮೀರಿ ಆಸ್ತಿ ಹೊಂದಿದ್ದ ಆರೋಪದ ಮೇರೆಗೆ ಹೆಚ್ಚಿನ ವಿಚಾರಣೆಗೆ ಬಂಧಿಸಲಾಗಿದೆ ಎಂದು  ಹೇಳಲಾಗಿದೆ. ಇತ್ತೀಚೆಗಷ್ಟೇ ಅಧಿಕಾರಿ ರಘುರಾಮಿ ರೆಡ್ಡಿ ಅವರಿಗೆ ಸೇರಿದ ಕಚೇರಿ ಹಾಗೂ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

ವಿಶಾಖಪಟ್ಟಣಂ, ವಿಜಯವಾಡ, ತಿರುಪತಿ ಮತ್ತು ಮಹಾರಾಷ್ಟ್ರದ ಶಿರಡಿ ಸೇರಿದಂತೆ ಒಟ್ಟು 15 ಪ್ರದೇಶಗಳಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಅಪಾರ ಪ್ರಮಾಣದ ಆಕ್ರಮ ಆಸ್ತಿ ಪತ್ತೆಯಾಗಿತ್ತು. ಅಧಿಕಾರಿ ರಘುರಾಮಿ  ರೆಡ್ಡಿ ಶಿರಡಿಯಲ್ಲಿ ಸಾಯಿ ಸೂರಜ್ ಕುಂಜ್ ಹೆಸರಿನ ಬೃಹತ್ ಹೊಟೆಲ್ ಹೊಂದಿದ್ದು, ವಿಜಯವಾಡದ ಗನ್ನವರಂ ಬಳಿ ಸುಮಾರು 300 ಎಕರೆ ಭೂಮಿಯನ್ನು ಕೂಡ ಹೊಂದಿರುವ ವಿಚಾರ ದಾಖಲೆಗಳ ಪರಿಶೀಲನೆ ವೇಳೆ  ತಿಳಿದುಬಂದಿತ್ತು. ಇದಲ್ಲದೆ ದಾಳಿ ವೇಳೆ ಮನೆಯಲ್ಲಿ 50 ಲಕ್ಷ ನಗದು ಹಣ ಕೂಡ ಪತ್ತೆಯಾಗಿತ್ತು. ಇದೇ ಕಾರಣಕ್ಕೆ ಅಧಿಕಾರಿ ರಘುರಾಮಿ ರೆಡ್ಡಿ ಅವರನ್ನು ಎಸಿಬಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ನಿವೃತ್ತಿಗೆ ಕೇವಲ 3 ದಿನ ಬಾಕಿ ಇತ್ತು
ವಿಪರ್ಯಾಸವೆಂದರೆ ನಿನ್ನೆ ಎಸಿಬಿ ಅಧಿಕಾರಿಗಳಿಂದ ಬಂಧನಕ್ಕೀಡಾದ ರಘುರಾಮಿ ರೆಡ್ಡಿ ಅವರು, ಇದೇ ಬುಧವಾರ ನಿವೃತ್ತರಾಗಲಿದ್ದರು. ಇದೇ ಕಾರಣಕ್ಕೆ ತಮ್ಮ ಸಿಬ್ಬಂದಿಗಳಿಗೆ, ಸ್ನೇಹಿತರಿಗೆ ಮತ್ತು ಸಂಬಂಧಿಗಳಿಗೆ ಅವರು  ಗ್ರ್ಯಾಂಡ್ ಪಾರ್ಟಿ ನೀಡಲು ಕೂಡ ಸಿದ್ಧತೆ ನಡೆಸಿಕೊಂಡಿದ್ದರಂತೆ. ಬಳಿಕ ಒಂದಷ್ಟು ದಿನ ವಿದೇಶ ಪ್ರವಾಸಕ್ಕೆ ತೆರಳು ಸಿದ್ಧತೆ ನಡೆಸಿಕೊಂಡಿದ್ದ ಅವರು ವಿಮಾನ ಟಿಕೆಟ್ ಕೂಡ ಬುಕ್ ಮಾಡಿಸಿದ್ದರಂತೆ. ಆದರೆ ಅಷ್ಟು ಹೊತ್ತಿಗಾಗಲೇ  ಎಸಿಬಿ ಅಧಿಕಾರಿಗಳಿಂದ ಬಂಧನಕ್ಕೀಡಾಗಿದ್ದಾರೆ.

ಎಸಿಬಿ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಇವರ ಅಧಿಕೃತ ಆದಾಯ ಮಾಸಿಕ ಸುಮಾರು 1 ಲಕ್ಷ ಇದೆ. ಇದರ ಹೊರತಾಗಿಯೂ ಇವರ ಬಳಿ ಸುಮಾರು 500 ಕೋಟಿ ಆಸ್ತಿ ಪತ್ತೆಯಾಗಿದೆ. ಇದಲ್ಲದೆ ಇನ್ನೂ ಹಲವು ಬ್ಯಾಂಕ್  ಲಾಕರ್ ಗಳು, ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಬೇಕಿದೆ. ಅಂತೆಯೇ ಕುಟುಂಬಸ್ಥರ ಹೆಸರಲ್ಲಿರುವ ಭೂಮಿಗಳ ಮೌಲ್ಯಮಾಪನ ಮಾಡಬೇಕಿದೆ. ಅಲ್ಲೂ ಮತ್ತಷ್ಟು ಆಸ್ತಿ ಪತ್ತೆಯಾಗುವ ಸಾಧ್ಯತೆ ಇದೆ. ಹೀಗಾಗಿ ರಘುರಾಮಿ ರೆಡ್ಡಿ  ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ನಿರ್ದೇಶಕ ಆರ್ ಪಿ ಠಾಕೂರ್ ಹೇಳಿದ್ದಾರೆ.

ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ
ಇನ್ನು ರುಘುರಾಮಿ ರೆಡ್ಡಿ ಅವರ ವಿಶಾಖಪಟ್ಟಣ ನಿವಾಸದಲ್ಲಿ 50 ಲಕ್ಷ ನಗದು ಹಣವಲ್ಲದೇ, 10 ಕೆಜಿಗೂ ಅಧಿಕ ಚಿನ್ನ ಪತ್ತೆಯಾಗಿತ್ತು. ಈ ಪೈಕಿ 4 ಕೋಟಿ ಮೌಲ್ಯದ ಚಿನ್ನಾಭರಣ, 5 ಲಕ್ಷ ಮೌಲ್ಯ ಬೆಳ್ಳಿ ಆಭರಣಗಳು, 25 ಕೆಜಿ ಬೆಳ್ಳಿ  ಪತ್ತೆಯಾಗಿತ್ತು. ಅಂತೆಯೇ ಕೃಷ್ಣಾ ಜಿಲ್ಲೆಯಲ್ಲಿ 11 ಎಕರೆ ಮಾವಿನ ತೋಟ, ಗುಂಟೂರಿನಲ್ಲಿ 5.15 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿರುವ ಬೃಹತ್ ಬಂಗಲೆಯ ದಾಖಲೆ ಪತ್ರಗಳು ಪತ್ತೆಯಾಗಿವೆ. ಅಂತೆಯೇ ರಘುರಾಮಿ ರೆಡ್ಡಿ  ಸಂಬಂಧಿಕರ ಹೆಸರಲ್ಲಿ ನಾಲ್ಕು ಖಾಸಗಿ ಸಂಸ್ಥೆಗಳು ಕೂಡ ಇದ್ದು, ಸಾಯಿ ಸಾಧನಾ ಇನ್ ಫ್ರಾ ಪ್ರಾಜೆಕ್ಟ್ಸ್, ಸಾಯಿ ಶ್ರದ್ಧಾ ಅವೆನ್ಯೂ, ಮಾತಾ ಇಂಡಸ್ಟ್ರೀಸ್, ನಲ್ಲೂರಿವಾರಿ ಚಾರಿಟಬಲ್ ಟ್ರಸ್ಟ್ ಎಂಬ ಹೆಸರಿನ ಸಂಸ್ಥೆಗಳು ಇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com