ತಮಿಳುನಾಡು: ಮಹಿಳಾ ಎಚ್ ಒಡಿಗೆ ಚಾಕುವಿನಿಂದ ಇರಿದ ವಜಾಗೊಂಡ ಅತಿಥಿ ಉಪನ್ಯಾಸಕ

ತನ್ನನ್ನು ಕೆಲಸದಿಂದ ಕಿತ್ತು ಹಾಕಿದ್ದಕ್ಕೆ ಆಕ್ರೋಶಗೊಂಡ ಕಾಮರಾಜ್ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರೊಬ್ಬರು....
ಡಾ.ಎಸ್ ಜೆನೆಫಾ - ಜ್ಯೋತಿ ಮುರಗನ್
ಡಾ.ಎಸ್ ಜೆನೆಫಾ - ಜ್ಯೋತಿ ಮುರಗನ್
ಮದುರೈ: ತನ್ನನ್ನು ಕೆಲಸದಿಂದ ಕಿತ್ತು ಹಾಕಿದ್ದಕ್ಕೆ ಆಕ್ರೋಶಗೊಂಡ ಕಾಮರಾಜ್ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರೊಬ್ಬರು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಗೆ ಆಕೆಯ ಕಚೇರಿಯಲ್ಲೇ ಚಾಕುವನಿಂದ ಇರಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಕೆಲಸದಿಂದ ವಜಾಗೊಂಡಿದ್ದ ಅತಿಥಿ ಉಪನ್ಯಾಸಕ ಜ್ಯೋತಿ ಮುರಗನ್ ಎಂಬುವವರು ಇಂದು ಬೆಳಗ್ಗೆ ಪತ್ರಿಕೋದ್ಯಮ ಮತ್ತು ವಿಜ್ಞಾನ ಸಂವಹನ ವಿಭಾಗ ಮುಖ್ಯಸ್ಥೆ ಹಾಗೂ ಸಹಾಯಕ ಪ್ರಾಧ್ಯಪಕಿ ಡಾ.ಎಸ್ ಜೆನೆಫಾ ಅವರಿಗೆ ಚಾಕುವಿನಿಂದ ಇರಿದಿದ್ದು, ಗಂಭೀರವಾಗಿ ಗಾಯಗೊಂಡ ಜೆನೆಫಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
32 ವರ್ಷದ ಜ್ಯೋತಿ ಮುರಗನ್ ಅವರು ಇದೇ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು, ಆದರೆ ಇತ್ತೀಚಿಗೆ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ಮುರಗನ್ ಇಂದು ಬೆಳಗ್ಗೆ ಚಾಕು ಸಮೇತ ವಿಭಾಗದ ಮುಖ್ಯಸ್ಥೆಯ ಕಚೇರಿಗೆ ತೆರಳಿ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಅನುಮಾನಗೊಂಡ ಕೆಲ ವಿದ್ಯಾರ್ಥಿಗಳು ಆತನನ್ನು ಸುತ್ತುವರಿದಿದ್ದಾರೆ. ಈ ವೇಳೆ ತನಗೆ ತಾನೇ ಚಾಕುವಿನಿಂದ ಇರಿದುಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜೆನೆಫಾ ಅವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂಬಂಧ ನಾಗಮಲೈಪುದುಕೊಟ್ಟೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com