ದಿಕ್ಕೆಟ್ಟಿದ್ದ ಅರ್ಥವ್ಯವಸ್ಥೆ ಸುಧಾರಣೆಗೆ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿತ್ತು: ಸಿನ್ಹಾಗೆ ಜೇಟ್ಲಿ ತಿರುಗೇಟು

ನೋಟು ನಿಷೇಧ, ಜಿಎಸ್'ಟಿ ಜಾರಿಯಿಂದ ಜಿಡಿಪಿ (ಭಾರತದ ಒಟ್ಟು ದೇಶೀಯ ಉತ್ಪನ್ನ) ಕುಸಿತ ಕಂಡಿದ್ದು, ದೇಶದ ಅರ್ಥವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂಬ ಯಶವಂತ ಸಿನ್ಹಾ ಹಾಗೂ ಚಿದಂಬರಂ ಅವರ ಟೀಕೆಗಳಿಗೆ ವಿತ್ತ ಸಚಿವ...
ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)

ನವದೆಹಲಿ: ನೋಟು ನಿಷೇಧ, ಜಿಎಸ್'ಟಿ ಜಾರಿಯಿಂದ ಜಿಡಿಪಿ (ಭಾರತದ ಒಟ್ಟು ದೇಶೀಯ ಉತ್ಪನ್ನ) ಕುಸಿತ ಕಂಡಿದ್ದು, ದೇಶದ ಅರ್ಥವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂಬ ಯಶವಂತ ಸಿನ್ಹಾ ಹಾಗೂ ಚಿದಂಬರಂ ಅವರ ಟೀಕೆಗಳಿಗೆ ಕೊನೆಗೂ ಮೌನ ಮುರಿದು ಮಾತನಾಡಿರುವ ವಿತ್ತ ಸಚಿವ ಅರುಣ್ ಜೇಟ್ಲಿಯವರು ದಿಕ್ಕೆಟ್ಟಿದ್ದ ಅರ್ಥವ್ಯವಸ್ಥೆ ಸುಧಾರಣೆಗೆ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿತ್ತು ಎಂದು ಶುಕ್ರವಾರ ಹೇಳಿದ್ದಾರೆ. 


ಇಂಡಿಯಾ ಅಟ್ 70, ಮೋದಿ ಅಟ್ 3.5 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಜೇಟ್ಲಿ, ಆರ್ಥಿಕ ಅವ್ಯವಸ್ಥೆ ಕುರಿತಂತೆ ಸಿನ್ಹಾ ಮಾಡಿದ್ದ ಟೀಕೆಗಳನ್ನು ತಿರಸ್ಕರಿಸಿದ್ದಾರೆ. ಅಲ್ಲದೆ, ಸರ್ಕಾರ ಜಾರಿಗೆ ತಂದಿರುವ ಆರ್ಥಿಕ ಸುಧಾರಣಾ ಕ್ರಮಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. 

ಯುಪಿಎ ಅಧಿಕಾರದ ಅವಧಿಯಲ್ಲಿ ಕುಸಿತ ಕಂಡಿದ್ದ ಅರ್ಥವ್ಯವಸ್ಥೆಯನ್ನು ನಮ್ಮ ಸರ್ಕಾರ ನೋಟು ನಿಷೇಧ, ತೆರಿಗೆ ಸುಧಾರಣೆ ನೀತಿ, ಕಪ್ಪು ಹಣ ಪತ್ತೆ ಹಾಗೂ ಸರಕು ಮತ್ತು ಸೇವಾ ತೆರಿಗೆ ಮೂಲಕ ಪುನಃ ಹಳಿಗೆ ತಂದಿದೆ. ಬಳುವಳಿ ರೀತಿಯಲ್ಲಿ ಉಳಿದು ಬಂದಿದ್ದ 9-10ರ ಹಣುದುಬ್ಬರ ಪ್ರಮಾಣಕ್ಕೆ ನಮ್ಮ ಸರ್ಕಾರ ತಡೆ ಹಾಕಿತು. ಕಳವಳಕಾರಿ ಮಟ್ಟದ ಹಣದುಬ್ಬರ ದರವನ್ನು ಶೇ.3.6ಕ್ಕೆ ಇಳಿಸಿದೆ. ಸೈದ್ಧಾಂತಿಕ ಧ್ರುವೀಕರಣದಿಂದ ದೇಶದಲ್ಲಿಂದು ಹೊಸ ಆರ್ಥಿಕತೆ ರೂಪುಗೊಂಡಿದೆ ಎಂದು ಹೇಳಿದ್ದಾರೆ. 

ಯುಪಿಎ-2 ಅಧಿಕಾರವಧಿಯಲ್ಲಿ ಉಂಟಾದ ಹಗರಣಗಳಿಂದಾಗಿ ವಿದೇಶಗಳಲ್ಲಿ ದೇಶಕ್ಕೆ ಕೆಟ್ಟ ಹೆಸರು ಬಂದಿತ್ತು. ಕಾಳಧನ ದಂಧೆಯಿಂದ ಅರ್ಥವ್ಯವಸ್ಥೆ ಮಂಗತಿಯಲ್ಲಿ ಸಾಗಿತ್ತು. ವಿದೇಶಿ ಬಂಡವಾಳ ಹೂಡಿಕೆ ಗಣನೀಯವಾಗಿ ಕುಸಿತ ಕಂಡಿತ್ತು. ಅನಾಮಧೇಯ ಮೂಲಗಳಿಂದ ಬರುವ ಹಣದ ಮೂಲಗಳನ್ನು ಹುಡುಕಿ ಮಾರುಕಟ್ಟೆಯಲ್ಲಿ ಅದರ ನಿಜವಾದ ಮಾಲೀಕನನ್ನು ಪತ್ತೆ ಮಾಡುವುದೇ ನೋಟು ನಿಷೇಧದ ಪ್ರಮುಖ ಉದ್ದೇಶವಾಗಿತ್ತು. ಈ ಮೂಲಕ ಕಾಳಧನ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿತ್ತು. 

ಪರ್ಯಾಯ ಅರ್ಥವ್ಯವಸ್ಥೆಯಾಗಿದ್ದ ಕಾಳಧನದ ಕಡಿವಾಣವನ್ನೇ ಅಜೆಂಡಾ ಮಾಡಿಕೊಂಡು ಆ ನಿಟ್ಟಿನಲ್ಲಿ ನಾವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಬೇನಾಮಿ ಆಸ್ತಿ ಪತ್ತೆಗೂ ಸರ್ಕಾರ ಕ್ರಮ ಕೈಗೊಂಡಿದೆ. ನೋಟು ನಿಷೇಧ ಮಾಡುವ ನಿರ್ಧಾರ ಘೋಷಣೆ ಮಾಡಿದಾಗ ವಿರೋಧ ಪಕ್ಷಗಳು ಭಾರೀ ಟೀಕೆಗಳನ್ನು ವ್ಯಕ್ತಪಡಿಸಿತ್ತು. ಜನರು ದಂಗೆ ಏಳಲಿದ್ದಾರೆ, ಹಸಿವಿನಿಂದ ಕಂಗೆಟ್ಟು ಬೀದಿಗೆ ಇಳಿಯಲಿದ್ದಾರೆಂದು ಹೇಳಿದ್ದರು. ಆದರೂ, ಸರ್ಕಾರ ಕಠಿಣ ನಿರ್ಧಾರವನ್ನು ತೆಗೆದುಕೊಂಡಿತ್ತು. ಒಟ್ಟಾರೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು ಎಂದು ತಿಳಿಸಿದ್ದಾರೆ. 

ಬಳಿಕ ಮಾಜಿ ಸಚಿವ ಯಶವಂತ್ ಸಿನ್ಹಾ ಅವರ ವಿರುದ್ಧ ಕಿಡಿಕಾರಿರುವ ಜೇಟ್ಲಿ, ಯಶವಂತ ಸಿನ್ಹಾ ಹಣಕಾಸು ಸಚಿವರಾಗಿದ್ದ ವೇಳೆ ದೇಶದ ಅರ್ಥ ವ್ಯವಸ್ಥೆ ಉದಾರೀಕರಣ ನೀತಿ ಜಾರಿಗೆ ಬಂದ ಬಳಿಕ ಅತ್ಯಂತ ಕೆಟ್ಟ ಪರಿಸ್ಥಿತಿಗೆ ಇಳಿದಿತ್ತು. ಹೀಗಾಗಿಯೇ ಅವರನ್ನು ಅಂದಿನ ಪ್ರಧಾನಮಂತ್ರಿ ವಾಜಪೇಯಿಯವರು ಸಂಪುಟದಿಂದ ಕೈಬಿಟ್ಟಿದ್ದರು ಎಂದು ಹೇಳಿದ್ದಾರೆ. 

ಹಣಕಾಸು ಸಚಿವರಾಗಿ ತಮ್ಮ ದಾಖಲೆಗಳನ್ನು ಮರೆತಿರುವ ಸಿನ್ಹಾ ಅವರು ಉದ್ಯೋಗಕ್ಕೆ ಈಗತಾನೇ ಅರ್ಜಿ ಹಾಕಿರುವ 80 ವರ್ಷದ ಯುವಕನಾಗಿದ್ದು, ನೀತಿಗಳನ್ನು ಬಿಟ್ಟ ವೈಯಕ್ತಿಕ ನೆಲೆಗಟ್ಟಿನಲ್ಲಿ ಟೀಕಿಸುತ್ತಿದ್ದಾರೆ ಇದು ಸರಿಯಲ್ಲ. 

ಸಿನ್ಹಾ ಅವರು ಕಾಂಗ್ರೆಸ್ ನಾಯಕ ಚಿದಂಬರಂ ಅವರ ಧಾಟಿಯಲ್ಲಿಯೇ ಮಾತನಾಡುತ್ತಿದ್ದಾರೆ. ಚಿದಂಬರಂ ಮತ್ತು ಸಿನ್ಹಾ ನಡುವಿನ ತೀವ್ರ ವಾಗ್ಯುದ್ಧಗಳನ್ನು ಅವರು ಮರೆತುಬಿಟ್ಟಿದ್ದಾರೆ ಎಂದಿದ್ದಾರೆ. 

ಬಳಿಕ ಸಿನ್ಹಾ ಅವರ ಹೆಸರನ್ನು ಹೇಳದೆಯೇ ಸಿನ್ಹಾ ಅವರ ವಿರುದ್ಧ ತೀವ್ರ ಟೀಕಾಪ್ರಹಾರ ಮಾಡಿರುವ ಅವರು, ಮಾಜಿ ಹಣಕಾಸು ಸಚಿವ (ಸಿನ್ಹಾ)ನಾಗುವ ಸುಖ ತನಗಿನ್ನೂ ದೊರಕಿಲ್ಲ, ಅಂಕಣಕಾರನಾಗಿ ಬದಲಾಗಿರುವ ಮಾಜಿ ಸಚಿವ (ಚಿದಂಬರಂ)ನಾಗುವ ಸೌಭಾಗ್ಯವೂ ತನಗಿನ್ನೂ ಬಂದಿಲ್ಲ ಎಂದು ಹೇಳಿದ್ದಾರೆ. 

ಒಂದೇ ಧ್ವನಿಯಲ್ಲಿ ಮಾತನಾಡಿದ ಕೂಡಲೇ ಸತ್ಯಗಳು ಬದಲಾಗುವುದಿಲ್ಲ. ಇಂತಹ ಟೀಕೆಗಳ ಮೂಲಕ ಸಿನ್ಹಾ ಈ ವಯಸ್ಸಿನಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕುತ್ತಿದ್ದಾರೆ. ಪುಸ್ತಕದ ಹೆಸರು ಇಂಡಿಯಾ ಅಟ್ 70, ಮೋದಿ ಅಟ್ 3.5 ಬದಲು ಇಂಡಿಯಾ ಅಟ್ 70 ಮೋದಿ ಅಟ್ 3.5 ಮತ್ತು ಉದ್ಯೋಗಾಕಾಂಕ್ಷಿ ಅಟ್ 80 ಎಂಬ ಶೀರ್ಷಿಕೆ ಈ ಪುಸ್ತಕಕ್ಕೆ ಹೆಚ್ಚು ಸೂಕ್ತವಾಗಿರುತ್ತಿತ್ತು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com