ಮುಂಬೈ ದುರಂತ: ರೈಲ್ವೇ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಪಿಐಎಲ್ ಸಲ್ಲಿಕೆ

ಮುಂಬೈ ಎಲ್ಫಿನ್'ಸ್ಟನ್ ರೈಲ್ವೇ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯವೇ...
ಮುಂಬೈ ಮೇಲ್ಸೇತುವೆ ಕಾಲ್ತುಳಿತ
ಮುಂಬೈ ಮೇಲ್ಸೇತುವೆ ಕಾಲ್ತುಳಿತ
ಮುಂಬೈ: ಮುಂಬೈ ಎಲ್ಫಿನ್'ಸ್ಟನ್ ರೈಲ್ವೇ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿ ರೈಲ್ವೇ ಇಲಾಖೆ ಅಧಿಕಾರಿಗಳ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ಶನಿವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಶನಿವಾರ ದಾಖಲಾಗಿದೆ.
ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 22 ಮಂದಿ ಸಾವನ್ನಪ್ಪಿದ್ದು, ಕಾಲ್ತುಳಿತಕ್ಕೆ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿರುವ ಸ್ಥಳೀಯ ಪ್ರದೀಪ್ ಭಲೇಕರ್ ಎಂಬುವವರು ರೈಲ್ವೇ ಅಧಿಕಾರಿಗಳ ವಿರುದ್ಧ ಪಿಐಎಲ್ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. 
ಪಿಐಎಲ್ ಕುರಿತಂತೆ ಭಲೇಕರ್ ಅವರ ಪರ ವಕೀಲ ನಿತಿನ್ ಸತ್ಪುತೆ ಮಾತನಾಡಿ, ಪ್ರದೀಪ್ ಅವರು ಸಲ್ಲಿಸಿರುವ ಪಿಐಎಲ್ ಈಗಾಗಲೇ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದು, ಅಕ್ಟೋಬರ್ 3 ರಂದು ವಿಚಾರಣೆ ನಡೆಯಲಿದೆ ಎಂದು ಹೇಳಿದ್ದಾರೆ. 
ಅರ್ಜಿಯಲ್ಲಿ ದುರಂತಕ್ಕೆ ರೈಲ್ವೇ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ಕೂಡಲೇ ಪ್ರಕರಣ ಸಂಬಂಧ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಕರಣ ಸಂಬಂಧ ಮಧ್ಯಸ್ಥಿಕೆ ವಹಿಸಿ ಸೂಕ್ತ ರೀತಿಯಲ್ಲಿ ನಿರ್ದೇಶಗಳನ್ನು ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ. 
ಮೇಲ್ಸೇತುವೆ ಕುಸಿಯುವ ಕುರಿತಂತೆ ಈ ಹಿಂದೆ ಸಾಕಷ್ಟು ಮಂದಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೂ ಸರ್ಕಾರವಾಗಲೀ ಅಥವಾ ರೈಲ್ವೇ ಇಲಾಖೆಯಾಗಲೀ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿರಲಿಲ್ಲ. ದುರಂತಕ್ಕೆ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ . ಹೀಗಾಗಿ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 304 (2) ನರಹತ್ಯೆ ಪ್ರಕರಣ ದಾಖಲು ಮಾಡಿಕೊಳ್ಳಬೇಕೆಂದು ಅರ್ಜಿಯಲ್ಲಿ ತಿಳಿಸಲಾಗಿದೆ. 
ನಿನ್ನೆಯಷ್ಟೇ ಮುಂಬೈನ ಎಲ್'ಫಿನ್'ಸ್ಟೋನ್ ರೈಲ್ವೆ ನಿಲ್ದಾಣದ ಬಳಿ ಇರುವ ಪಾದಚಾರಿಗಳ ಮೇಲ್ಸೇತುವೆಯಲ್ಲಿ ದುರ್ಘಟನೆಯೊಂದು ಸಂಭವಿಸಿತ್ತು. ಮೇಲ್ಸೇತುವೆ ಕುಸಿದು ಬೀಳಲಿದೆ ಎಂಬ ವದಂತಿಗಳಿಗೆ ಕಿವಿಗೊಟ್ಟಿದ್ದ ಸ್ಥಳೀಯರು ಆತಂಕಗೊಂಡಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 22 ಮಂದಿ ಸಾವನ್ನಪ್ಪಿ, 30 ಮಂದಿ ಗಾಯಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com