ಹೆಸರಾಂತ ನಟರಾಗಿದ್ದ ಟಾಮ್ ಆಲ್ಟರ್ ಅವರು ಹಲವು ದಿನಗಳಿಂದಲೂ ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
ಅಮೆರಿಕ ಮೂಲದ ಭಾರತೀಯ ನಟ ಟಾಮ್ ಅವರು ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ 2008ರಲ್ಲಿ ಉನ್ನತ ನಾಗರಿಕ ಗೌರವವಾದ ಪದ್ಮಶ್ಮೀಯನ್ನು ನೀಡಿ ಸನ್ಮಾನಿಸಿತ್ತು.
ಸುಮಾರು 300ಕ್ಕೂ ಹೆಚ್ಚು ಚಿತ್ರಗಳು, ಅಸಂಖ್ಯಾತ ಟಿವಿ ಶೋಗಳಲ್ಲಿ ನಟಿಸಿದ್ದ ಅವರು 1990ರ ದಶಕದಲ್ಲಿ ಮನೆ ಮಾತಾಗಿದ್ದರು. ಅವರ ಸೂಪರ್ ಹಿಟ್ ಧಾರಾವಾಹಿ 'ಜುನೂನ್'ನಲ್ಲಿ ಗ್ಯಾಂಗ್'ಸ್ಟರ್ ಕೇಶವ್ ಕಲ್ಸಿ ಪಾತ್ರದಲ್ಲಿ ಟಾಮ್ ಅವರು ಅದ್ಭುತವಾಗಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಕೇವಲ ಸಿನಿಮಾ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಟಾಮ್ ಅವರಿಗೆ ಪತ್ರಿಕೋದ್ಯಮವೆಂದರೆ ತುಂಬು ಆಸಕ್ತಿ. ಅದರಲ್ಲೂ ಕ್ರೀಡಾ ಪತ್ರಿಕೋದ್ಯಮ ಅವರ ಇಷ್ಟದ ಕ್ಷೇತ್ರ. ನಟನೆ ಜೊತೆಗೆ ನಿರ್ದೇಶನವನ್ನೂ ಮಾಡಿದ್ದ ಟಾಮ್ ಅವರು 80 ಮದ್ತು 90ರ ದಶಕದಲ್ಲಿ ಕ್ರೀಡಾ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು. ಮೊಟ್ಟಮೊದಲ ಬಾರಿಗೆ ಚಾನೆಲ್ ವೊಂದರಲ್ಲಿ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರನ್ನು ಸಂದರ್ಶನ ಮಾಡಿದ ಕೀರ್ತಿ ಇವರದು.