ರಫೇಲ್ ಜೆಟ್ ಯುದ್ಧ ವಿಮಾನ ಆಗಮನ ಹಿನ್ನಲೆ, ಅಂಬಾಲ, ಹಸಿಮರಾ ವಾಯುನೆಲೆ ಮೇಲ್ದರ್ಜೆಗೆ

ಶೀಘ್ರದಲ್ಲೇ ಭಾರತೀಯ ವಾಯುಸೇನೆ ಸೇರಲಿರುವ ಫ್ರಾನ್ಸ್ ಮೂಲದ ಅತ್ಯಾಧುನಿಕ ಯುದ್ಧ ವಿಮಾನ ರಫಾಲೆ ಜೆಟ್ ಸ್ವಾಗತಕ್ಕೆ ಭಾರತ ಸಜ್ಜುಗೊಳ್ಳುತ್ತಿದ್ದು, ಇದಕ್ಕಾಗಿ ಪಾಕ್ ಗಡಿಗೆ ಸಮೀಪವಿರುವ ಎರಡು ಪ್ರಮುಖ ಯುದ್ಧ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
ರಫೇಲ್ ಜೆಟ್ ಯುದ್ಧ ವಿಮಾನ
ರಫೇಲ್ ಜೆಟ್ ಯುದ್ಧ ವಿಮಾನ
Updated on
ನವದೆಹಲಿ: ಶೀಘ್ರದಲ್ಲೇ ಭಾರತೀಯ ವಾಯುಸೇನೆ ಸೇರಲಿರುವ ಫ್ರಾನ್ಸ್ ಮೂಲದ ಅತ್ಯಾಧುನಿಕ ಯುದ್ಧ ವಿಮಾನ ರಫೇಲ್ ಜೆಟ್ ಸ್ವಾಗತಕ್ಕೆ ಭಾರತ ಸಜ್ಜುಗೊಳ್ಳುತ್ತಿದ್ದು, ಇದಕ್ಕಾಗಿ ಪಾಕ್ ಗಡಿಗೆ ಸಮೀಪವಿರುವ ಎರಡು ಪ್ರಮುಖ  ಯುದ್ಧ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
ಇದಕ್ಕಾಗಿ ಹರ್ಯಾಣದ ಅಂಬಾಲ ವಾಯು ನಿಲ್ದಾಣ ಮತ್ತು ಪಶ್ಚಿಮ ಬಂಗಾಳದ ಹಸಿಮರಾ ವಾಯುನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ವಾಯು ಸೇನೆ ನಿರ್ಧರಿಸಿದೆ. ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವಂತೆ  ಮುಂದಿನ 50 ವರ್ಷಗಳ ವಾಯುಸೇನೆ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಎರಡು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇದೇ ಸೆಪ್ಟೆಂಬರ್ ಅಂತ್ಯದೊಳಗೆ ರಫೇಲ್ ಜೆಟ್ ಯುದ್ಧ ವಿಮಾನಗಳು ಭಾರತಕ್ಕೆ  ಬರಲಿದ್ದು. ಇದಕ್ಕಾಗಿ ಈ ಎರಡೂ ವಿಮಾನ ನಿಲ್ದಾಣಗಳನ್ನ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಈ ಯೋಜನೆಗಾಗಿ ಕೇಂದ್ರ ಸರ್ಕಾರ ಒಟ್ಟು 220 ಕೋಟಿ ರು.ಗಳನ್ನು ವ್ಯಯಿಸುತ್ತಿದ್ದು, ಒಟ್ಟು 14 ಶೆಲ್ಟರ್ ಗಳು, ಹ್ಯಾಂಗರ್ ಗಳು ಮತ್ತು ನಿರ್ವಹಣಾ ಕೇಂದ್ರಗಳನ್ನು ಅಂಬಾಲಾದಲ್ಲಿ ನಿರ್ಮಿಸಲಾಗುತ್ತಿದೆ. ಈ  ನಿಲ್ದಾಣದಿಂದ ಪಾಕಿಸ್ತಾನ ಗಡಿಗೆ ಸುಮಾರು 220 ಕಿ.ಮೀ ದೂರವಿದ್ದು, ಪಾಕಿಸ್ತಾನವನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಭಾರತೀಯ ಸೇನೆಗೆ ಈ ನಿಲ್ದಾಣ ತುಂಬಾ ಪ್ರಾಮುಖ್ಯತೆ ಪಡೆದಿದೆ. ಪ್ರಸ್ತುತ ಅಂಬಾಲದಲ್ಲಿ 2ಸ್ಕ್ವಾಡ್ರನ್ ಜಾಗ್ವಾರ್  ಯುದ್ಧ ವಿಮಾನಗಳನ್ನು ಮತ್ತು 1 ಸ್ಕ್ವಾಡ್ರನ್ ಮಿಗ್ 21 ಬೈಸನ್ ಯುದ್ಧ ವಿಮಾನಗಳನ್ನು ನಿರ್ವಹಣೆ ಮಾಡಲಾಗುತ್ತಿದೆ.

ಅಂಬಾಲದಲ್ಲಿರುವಂತೆ ಹಸಿಮರಾದಲ್ಲಿರುವ ವಾಯುನೆಲೆಯನ್ನೂ ಕೂಡ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಈ ಎರಡೂ ನೆಲೆಗಳಿಗೂ ಸಿಮ್ಯುಲೇಟರ್ ಆಧಾರಿತ ತರಬೇತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಈಗಾಗಲೇ  ವಾಯುಸೇನೆಯ ನುರಿತ ಪೈಲಟ್ ಗಳನ್ನು ಹಾಗೂ ಸಿಬ್ಬಂದಿಗಳನ್ನು ಫ್ರಾನ್ಸ್ ಗೆ ಕಳುಹಿಸಲಾಗಿದ್ದು, ಎಲ್ಲ ಸಿಬ್ಬಂದಿಗಳಿಗೂ ತರಬೇತಿ ನೀಡಲಾಗುತ್ತಿದೆ.

ಕಳೆದ ಸೆಪ್ಟೆಂಬರ್ ನಲ್ಲಿ ಭಾರತ ಫ್ರಾನ್ಸ್ ನೊಂದಿಗೆ ಸುಮಾರು 59 ಸಾವಿರ ಕೋಟಿ ಮೌಲ್ಯದ 36 ರಫೇಲ್ ಜೆಟ್ ಯುದ್ಧ ವಿಮಾನಗಳನ್ನು ಖರೀದಿಸು ಕುರಿತು ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ ಹಸಿಮರಾ ಮತ್ತು ಅಂಬಾಲ  ಎರಡೂ ವಾಯುನೆಲೆಗಳೂ ತಲಾ 18 ರಫೇಲ್ ಜೆಟ್ ಯುದ್ಧ ವಿಮಾನಗಳನ್ನು ಹೊಂದಲಿವೆ.

ರಫೇಲ್ ಯುದ್ಧ ವಿಮಾನಗಳು ಅಣ್ವಸ್ತ್ರ ಸಹಿತ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ರಾಡಾರ್ ವಾರ್ನಿಂಗ್ ವ್ಯವಸ್ಥೆ, ಲೋ ಬ್ಯಾಂಡ್ ಜಾಮರ್ ಗಳು, ಸತತ 10 ಗಂಟೆಗಳ ದೀರ್ಘಾವಧಿಯ ಫ್ಲೈಟ್ ಡಾಟಾ  ರೆಕಾರ್ಡಿಂಗ್ ವ್ಯವಸ್ಥೆ, ಇನ್ ಫ್ರಾರೆಡ್ ಶೋಧ ವ್ಯವಸ್ಥೆ, ಟ್ರಾಕಿಂಗ್ ವ್ಯವಸ್ಥೆಗಳನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com