ಜೋಧ್ ಪುರ: ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಜೋಧ್ ಪುರ್ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ.
ಈ ಮಧ್ಯೆ, ಸಲ್ಮಾನ್ ಖಾನ್ ಪರ ವಕೀಲರು ನಟನಿಗೆ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಬರಲಿದೆ. ಹೀಗಾಗಿ ಸಲ್ಮಾನ್ ಖಾನ್ ಇಂದು ರಾತ್ರಿ ಜೈಲಿನಲ್ಲೇ ಕಾಳ ಕಳೆಯಬೇಕಾಗಿದೆ.
20 ವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪನ್ನು ಇಂದು ಪ್ರಕಟಿಸಿದ ರಾಜಸ್ತಾನದ ಜೋಧ್ ಪುರ್ ಕೋರ್ಟ್, ಸಲ್ಮಾನ್ ಖಾನ್ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಹ ಆರೋಪಿಗಳಾಗಿದ್ದ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ ಅವರನ್ನು ಖುಲಾಸೆಗೊಳಿಸಿದೆ.
ತೀರ್ಪು ಪ್ರಕಟವಾಗುತ್ತಿದ್ದಂತೆ ಸಲ್ಮಾನ್ ಖಾನ್ ಕಣ್ಣು ತುಂಬಿ ಬಂದರೂ ಅದನ್ನು ತೋರಿಸಿಕೊಳ್ಳದೆ ಸಮಾಧಾನವಾಗಿಯೇ ಇದ್ದರು ಎನ್ನಲಾಗಿದೆ.
ಸಲ್ಮಾನ್ ಖಾನ್ ಅವರನ್ನು ವಶಕ್ಕೆ ಪಡೆದ ಪೊಲೀಸರು ಸೆಂಟ್ರಲ್ ಜೈಲಿಗೆ ಕೊರೆದೊಯ್ದಿದ್ದು, ವೈದ್ಯಕೀಯ ತಾಪಸಣೆಯ ನಂತರ ಕೈದಿ ಸಂಖ್ಯೆ 106 ನೀಡಲಾಗಿದೆ. ಅಲ್ಲದೆ ಜೈಲಿನಲ್ಲಿ ಸ್ವಯಂ ಘೋಷಿತ ದೇವಮಾನವ ಅಸರಾಂ ಬಾಪು ಇರುವ ಕೊಣೆಯನ್ನು ನೀಡಲಾಗಿದೆ.