ಸಿಬಿಎಸ್ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ಹಿಮಾಚಲ ಪ್ರದೇಶ ಶಾಲೆ 3 ಸಿಬ್ಬಂದಿಗಳ ಬಂಧನ
ದೇಶದಾದ್ಯಂತ ತೀವ್ರ ಸುದ್ದಿ ಹಾಗೂ ಚರ್ಚೆಗೆ ಗ್ರಾಸವಾಗಿದ್ದ ಸಿಬಿಎಸ್ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದಲ್ಲಿರುವ ಶಾಲೆಯೊಂದರ ಮೂವರು ಸಿಬ್ಬಂದಿಗಳನ್ನು ದೆಹಲಿ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ...
ನವದೆಹಲಿ; ದೇಶದಾದ್ಯಂತ ತೀವ್ರ ಸುದ್ದಿ ಹಾಗೂ ಚರ್ಚೆಗೆ ಗ್ರಾಸವಾಗಿದ್ದ ಸಿಬಿಎಸ್ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದಲ್ಲಿರುವ ಶಾಲೆಯೊಂದರ ಮೂವರು ಸಿಬ್ಬಂದಿಗಳನ್ನು ದೆಹಲಿ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಹಿಮಾಚಲ ಪ್ರದೇಶದ ಶಾಲೆಯಲ್ಲಿ ಸೂಪರಿಂಟೆಂಡೆಂಟ್ ಆಗಿರುವ ರಾಕೇಶ್, ಗುಮಾಸ್ತ ಅಮಿತ್ ಹಾಗೂ ಜವಾನ ಅಶೋಕ್ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ದೆಹಲಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮೂವರೂ ಆರೋಪಿಗಳನ್ನು ಈಗಾಗಲೇ ರಾಜಧಾನಿ ದೆಹಲಿಗೆ ಕರೆತರಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈಬರಹದಲ್ಲಿ ಬರೆಯಲಾಗಿದ್ದ 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಮಾರ್ಚ್ 26 ರಂದು ಸೋರಿಕೆಯಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಮರು ಪರೀಕ್ಷೆಯನ್ನು ಏ.25ರಂದು ನಡೆಸಲಾಗುತ್ತದೆ ಎಂದು ಸಿಬಿಎಸ್ಇ ಹೇಳಿತ್ತು.