ಗಡಿಯಲ್ಲಿ ಪಾಕ್ ಸೇನೆಯಿಂದ ತೀವ್ರ ಶೆಲ್ ದಾಳಿ, ಭಾರತದ ಇಬ್ಬರು ಸೈನಿಕರು ಹುತಾತ್ಮ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಮತ್ತೆ ಪಾಕಿಸ್ತಾನಿ ಸೈನಕರು ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಶೆಲ್ ದಾಳಿಯಲ್ಲಿ ಕನಿಷ್ಠ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಮತ್ತೆ ಪಾಕಿಸ್ತಾನಿ ಸೈನಕರು ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಶೆಲ್ ದಾಳಿಯಲ್ಲಿ ಕನಿಷ್ಠ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ರಜೌರಿ ಸೆಕ್ಟರ್ ನಲ್ಲಿ ಇಂದು ಮುಂಜಾನೆಯಿಂದಲೇ ಪಾಕಿಸ್ತಾನಿ ಸೈನಕರು ತೀವ್ರ ಶೆಲ್ ದಾಳಿ ನಡೆಸಿದ್ದು, ಈ ವೇಳೆ ಕರ್ತವ್ಯ ನಿರತರಾಗಿದ್ದ ಇಬ್ಬರು ಸೈನಿಕರು ಶೆಲ್ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.  
ಸೇನಾಧಿಕಾರಿಗಳು ತಿಳಿಸಿರುವಂತೆ ರಜೌರಿ ಜಿಲ್ಲೆಯ ಎಲ್ ಒಸಿ ಬಳಿಯ ಸುಂದರ್  ಬನಿ ಸೆಕ್ಚರ್ ಮೇಲೆ ಪಾಕಿಸ್ತಾನ ದಾಳಿ ನಡೆಸಿದ್ದು, ಸ್ವಯಂಚಾಲಿತ ಮಾರ್ಟರ್ ಗಳು ಮತ್ತು ಮೆಷಿನ್ ಗನ್ ಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಸಂದರ್ ಬನಿ ಸೆಕ್ಟರ್ ನಲ್ಲಿದ್ದ ಯೋಧರಾದ ರೈಫಲ್ ಮನ್ ವಿನೋದ್ ಸಿಂಗ್ ಮತ್ತು ರೈಫಲ್ ಮನ್ ಜಾಕಿ ಶರ್ಮಾ ಎಂಬ ಇಬ್ಬರು ಸೈನಿತರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಯಿತಾದರೂ. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದರು ಎಂದು ತಿಳಿದುಬಂದಿದೆ.
ಹುತಾತ್ಮ ಯೋಧರ ಪೈಕಿ ವಿನೋದ್ ಸಿಂಗ್ ಇದೇ ಜಮ್ಮು ಕಾಶ್ಮೀರ ಮೂಲದವರಾಗಿದ್ದು, ಅಖ್ನೂರ್ ಜಿಲ್ಲೆಯ ದಾನಪರು ಗ್ರಾಮದವರೆಂದು ತಿಳಿದುಬಂದಿದೆ. ಇನ್ನು ಮತ್ತೋರ್ವ ಯೋಧ ಜಾಕಿ ಶರ್ಮಾ ಕೂಡ ಸ್ಥಳೀಯರಾಗಿದ್ದು, ಇವರು ಹಿರಾನಗರ್ ಜಿಲ್ಲೆಯ ಸನ್ ಹೈಲ್ ಗ್ರಾಮದವರು ಎಂದು ತಿಳಿದುಬಂದಿದೆ. ಜಾಕಿ ಶರ್ಮಾ ಅವರಿಗೆ ಇತ್ತೀಚೆಗಷ್ಟೇ ವಿವಾಹವಾಗಿತ್ತು ಎನ್ನಲಾಗಿದೆ.
ಇನ್ನು ಪಾಕಿಸ್ತಾನ ಸೇನೆಯ ಉದ್ಧಟತನಕ್ಕೆ ಭಾರತೀಯ ಸೈನಿಕರೂ ಕೂಡ ದಿಟ್ಟ ಉತ್ತರ ನೀಡುತ್ತಿದ್ದು, ಗಡಿಯಲ್ಲಿ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದೆ.  ಇನ್ನು ಹುತಾತ್ಮ ಯೋಧರಿಗೆ ರಕ್ಷಣಾ ಇಲಾಖೆ ಕಂಬನಿ ಮಿಡಿದಿದ್ದು, ಅವರ ಕುುಟುಂಬಗಳಿಗೆ ಸಾಂತ್ವನ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com