ಲಖನೌ: ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ತಂದೆಯ ದೇಹದಲ್ಲಿ ಪೊಲೀಸ್ ಕಸ್ಟಡಿಗೂ ಮುನ್ನ ಯಾವುದೇ ರೀತಿಯ ಆಂತರಿಕ ಗಾಯಗಳಿರಲಿಲ್ಲ ಎಂದು ವರದಿಗಳು ತಿಳಿಸಿವೆ.
ಪೊಲೀಸ್ ಕಸ್ಟಡಿಗೂ ಮುನ್ನ ಸಂತ್ರಸ್ತ ಯುವತಿಯ ತಂದೆಗೆ ಅಲ್ಟ್ರಾಸೌಂಡ್ ಸ್ಕಾನಿಂಗ್'ಗೆ ಒಳಪಡಿಸಲಾಗಿದೆ. ಈ ವೇಳೆ ಅವರಲ್ಲಿ ಯಾವುದೇ ರೀತಿಯಲ ಆಂತರಿಕ ಗಾಯಗಳಿರಲಿಲ್ಲ ಎಂಬುದು ವರದಿಯಲ್ಲಿ ತಿಳಿಸಿದೆ.
ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ಇದಕ್ಕೆ ತದ್ವಿರುದ್ಧವಾಗಿ ವರದಿಗಳನ್ನು ನೀಡಿದ್ದಾರೆ. ಆಘಾತ, ರಕ್ತದ ಸೋಕು ಹಾಗೂ ಬ್ಯಾಕ್ಟಿರಿಯಾ ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ತಿಳಿಸಲಾಗಿದೆ. ಎರಡೂ ವರದಿಗಳಿಂದಾಗಿ ಇದೀಗ ಪ್ರಕರಣ ಸಂಬಂಧ ಸಾಕಷ್ಟು ಅನುಮಾನಗಳು ಮೂಡತೊಡಗಿವೆ.
ಒಂದೆಡೆ ಅಧಿಕಾರಿಗಳು ಆರೋಗ್ಯ ಸಮಸ್ಯೆಗಳಿಂದಾಗಿ ಸಂತ್ರಸ್ತೆ ತಂದೆ ಮೃತಪಟ್ಟಿದ್ದಾರೆಂದು ಹೇಳುತ್ತಿದ್ದರೆ, ಮತ್ತೊಂದೆಡೆ ಕುಟುಂಬಸ್ಥರು ಪೊಲೀಸರೇ ಹತ್ಯೆ ಮಾಡಿದ್ದಾರೆಂದು ಆರೋಪ ಮಾಡುತ್ತಿದ್ದಾರೆ.
ಪ್ರಸ್ತುತ ಪ್ರಕರಣವನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯಾಂಶಗಳು ಬಹಿರಂಗಗೊಳ್ಳಲಿದೆ.