ಸಿಜೆಐ ಪದಚ್ಯುತಿ ನೋಟಿಸ್ ತಿರಸ್ಕರಿಸಿದ್ದನ್ನು 'ಸುಪ್ರೀಂ'ನಲ್ಲಿ ಪ್ರಶ್ನಿಸುವಂತಿಲ್ಲ; ಮಾಜಿ ಅಟಾರ್ನಿ ಜನರಲ್‌

ಮಹಾಭಿಯೋಗ ನಿಲುವಳಿ ಸೂಚನೆ ಕುರಿತ ಸಭಾಪತಿಗಳ ನಿರ್ಣಯವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವಂತಿಲ್ಲ ಎಂದು ಮಾಜಿ ಅಟಾರ್ನಿ ಜನರಲ್ ಕೆ. ಪರಾಶರನ್‌ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಮಂಡಿಸಿದ್ದ ಮಹಾಭಿಯೋಗ ನಿಲುವಳಿ ಸೂಚನೆಯನ್ನು ಸಭಾಪತಿಗಳು ತಿರಸ್ಕರಿಸಿದ್ದರು. ಆದರೆ ಸಭಾಪತಿಗಳ ನಿರ್ಣಯವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವಂತಿಲ್ಲ ಎಂದು ಮಾಜಿ ಅಟಾರ್ನಿ ಜನರಲ್ ಕೆ. ಪರಾಶರನ್‌ ಹೇಳಿದ್ದಾರೆ. 
ಇದೀಗ ಸಿಜೆಐ ದೀಪಕ್‌ ಮಿಶ್ರಾ ವಿರುದ್ಧದ ಮಹಾಭಿಯೋಗ ನಿಲುವಳಿ ಸೂಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಪತ್ರ ಬರೆದಿರುವ ಅವರು, 'ಸಿಜಿಐ ಪದಚ್ಯುತಿ ಕುರಿತ ಪ್ರತಿಪಕ್ಷಗಳ ಗೊತ್ತುವಳಿಯನ್ನು ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ತಿರಸ್ಕರಿಸಿರುವುದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವಂತಿಲ್ಲ ಎಂದು ಪರಶಾರನ್ ಹೇಳಿದ್ದಾರೆ. 
'ಒಬ್ಬ ನ್ಯಾಯಾಧೀಶರ ಪದಚ್ಯುತಿ ಆಗ್ರಹಿಸಿ ಲೋಕಸಭೆ ಸ್ಪೀಕರ್‌ ಅಥವಾ ರಾಜ್ಯಸಭೆ ಅಧ್ಯಕ್ಷರಿಗೆ ಬಂದ ನೋಟೀಸನ್ನು ಅವರು ತಿರಸ್ಕರಿಸಬಹುದು ಅಥವಾ ಪುರಸ್ಕರಿಸಬಹುದು. ಏನೇ ಆದರೂ ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗದು. ಇದು ಸಂಪೂರ್ಣ ಸ್ಪೀಕರ್ ಅಥವಾ ಸಭಾಪತಿಗಳ ಅಧಿಕಾರ ವ್ಯಾಪ್ತಿಗೆ ಸೇರಿದ ವಿಷಯವಾಗಿದ್ದು, ಸಂಸದರು ನೀಡಿದ ನೋಟೀಸ್‌ನಲ್ಲಿ ಉಲ್ಲೇಖಿಸಿದ ಆರೋಪಗಳ ಅರ್ಹತೆಯನ್ನು ನಿರ್ಧರಿಸುವ ಅಧಿಕಾರ ಅವರಿಗಿದೆ. ಮೇಲ್ನೋಟಕ್ಕೆ ಆರೋಪಗಳಲ್ಲಿ ಹುರುಳಿದೆ ಅನಿಸದರೆ ಸೂಕ್ತ ತನಿಖೆಗೆ ಆದೇಶಿಸಬಹುದು. ಇಲ್ಲವಾದರೆ ನೋಟೀಸ್ ಅನ್ನು ತಿರಸ್ಕರಿಸಬಹುದು. ಏನೇ ಆದರೂ ಅವರ ತೀರ್ಮಾನವೇ ಅಂತಿಮ ಎಂದು ಕೆ ಪರಶಾರನ್ ಅವರು ಹೇಳಿದ್ದಾರೆ. 
ಇದೇ ವೇಳೆ ತಮ್ಮ ಪತ್ರದಲ್ಲಿ 1992 ಆಗಸ್ಟ್‌ 27ರಂದು ನ್ಯಾಯಮೂರ್ತಿ ಜೆ.ಎಸ್‌ ವರ್ಮಾ ನೇತೃತ್ವದ ಪಂಚಸದಸ್ಯ ಸಂವಿಧಾನ ಪೀಠ ನೀಡಿದ ತೀರ್ಪನ್ನು ಉಲ್ಲೇಖಿಸಿರುವ ಪರಾಶರನ್‌, 'ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆ ಬೇಡವೆ ಎಂಬುದನ್ನು ಸ್ಪೀಕರ್‌ ಅಥವಾ ಸಭಾಪತಿಗಳು ನಿಗದಿತ ವಿಧಾನದಲ್ಲಿ ತೀರ್ಮಾನಿಸುತ್ತಾರೆ. ನಿಗದಿತ ಸಂಖ್ಯೆಯ ಸಂಸದರು ಗೊತ್ತುವಳಿಗೆ ಸಹಿ ಹಾಕಿರದಿದ್ದರೂ ಅದನ್ನು ತಿರಸ್ಕರಿಸುವ ಅಧಿಕಾರ ಅವರಿಗಿದೆ. ಅವರ ತೀರ್ಮಾನವೇ ಅಂತಿಮವಾಗಿರುತ್ತದೆ' ಎಂದು ಸ್ಪಷ್ಟಪಡಿಸಿದ್ದಾರೆ. 
ಕೆ ಪರಶಾರನ್ ಅವರು, ಇಂದಿರಾಗಾಂಧಿ ಹಾಗೂ ರಾಜೀವ್‌ ಗಾಂಧಿ ಅವರ ಸರ್ಕಾರದ ಅವಧಿಯಲ್ಲಿ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. 1983ರ ಆಗಸ್ಟ್‌ 9ರಿಂದ 1989 ಡಿಸೆಂಬರ್‌ 8ರ ವರೆಗೆ ಪರಾಶರನ್‌ ಅಟಾರ್ನಿ ಜನರಲ್‌ ಆಗಿದ್ದರು. ಅಲ್ಲದೆ ರಾಜ್ಯಸಭಾ ಸದಸ್ಯರಾಗಿಯೂ ಕೆ ಪರಶಾರನ್ ಅವರು ಸೇವೆ ಸಲ್ಲಿಸಿದ್ದರು ಎಂಬುದು ಗಮನಾರ್ಹ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com