ನವದೆಹಲಿ: ಜ್ಞಾನಪೀಠ ಪುರಸ್ಕೃತ ಕವಯತ್ರಿ, ಸ್ವಾತಂತ್ರ ಹೋರಾಟಗಾರ್ತಿ, ಮಹಿಳಾ ಹಕ್ಕು ಪ್ರತಿಪಾದಕಿ ಮಹಾದೇವಿ ವರ್ಮಾ ಜನ್ಮದಿನದ ನಿಮಿತ್ತ ಗೂಗಲ್ ಡೂಡಲ್ ಇಂದು ಅವರ ಚಿತ್ರವನ್ನು ಪ್ರಕಟಿಸಿ ವಿಶೇಷ ಗೌರವ ಸಲ್ಲಿಸಿದೆ.
ಡೂಡಲ್‌ನಲ್ಲಿ ಅವರನ್ನು ಡೈರಿ ಮತ್ತು ಪೆನ್ ಹಿಡಿದುಕೊಂಡು ಗಹನವಾದ ಚಿಂತನೆಯಲ್ಲಿ ಮುಳುಗಿರುವಂತೆ ಚಿತ್ರಿಸಲಾಗಿದೆ. ಅತಿಥಿ ಕಲಾವಿದ ಸೋನಾಲಿ ಜೋಹ್ರಾ ಈ ಚಿತ್ರ ಬರೆದಿದ್ದಾರೆ.
ಆಧುನಿಕ ಮೀರಾ ಎಂದೇ ಪ್ರಖ್ಯಾತರಾಗಿರುವ ವರ್ಮಾ ಮಾರ್ಚ್ 26, 1907ರಲ್ಲಿ ಫರುಖಾಬಾದ್‌ನಲ್ಲಿ ಜನಿಸಿದ್ದರು. 9ನೇ ವಯಸ್ಸಿಗೆ ಮದುವೆಯಾಗಿದ್ದ ಅವರು ತಂದೆ-ತಾಯಿಗಳ ಪ್ರೋತ್ಸಾಹದೊಂದಿಗೆ ತವರಿನಲ್ಲಿದ್ದುಕೊಂಡೇ ತಮ್ಮ ಶಿಕ್ಷಣವನ್ನು ಮುಂದುವರಿಸಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಭಾರತೀಯ ಸಾಹಿತ್ಯಕ್ಕೆ ಅವರು ನೀಡಿದ ಅನುಪಮ ಸೇವೆಯನ್ನು ಪರಿಗಣಿಸಿ 1982ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 1956ರಲ್ಲಿ ಪದ್ಮ ಭೂಷಣ, 1979ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಮತ್ತು 1988ರಲ್ಲಿ ಪದ್ಮ ವಿಭೂಷಣದಿಂದ ಸನ್ಮಾನಿತರಾಗಿದ್ದರು.