ಜಸ್ಟೀಸ್ ಕೆಎಂ ಜೋಸೆಫ್ ಬಡ್ತಿ ನೀಡಿಕೆ ವಿಚಾರ: ಸರ್ಕಾರದ ಉತ್ತರ ಸತ್ಯಕ್ಕೆ ದೂರವೇ?

ಉತ್ತರಾಖಂಡ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರಿಗೆ ಬಡ್ತಿ ನೀಡುವಂತೆ ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ಉತ್ತರಾಖಂಡ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರಿಗೆ ಬಡ್ತಿ ನೀಡುವಂತೆ ಸುಪ್ರೀಂ ಕೋರ್ಟ್ ನ ಕೊಲ್ಜಿಯಂ(ನ್ಯಾಯಮಂಡಳಿ) ಶಿಫಾರಸುಗಳನ್ನು ತಡೆಹಿಡಿಯಲು ಪ್ರಾದೇಶಿಕ ಪ್ರಾತಿನಿಧ್ಯ, ಸೇವಾ ಹಿರಿತನ ಮತ್ತು ಎಸ್ ಸಿ/ಎಸ್ ಟಿ ನ್ಯಾಯಾಧೀಶರ ಕೊರತೆ ಕಾರಣ ಎಂದು ಕೇಂದ್ರ ಸರ್ಕಾರ ನೀಡಿರುವ ಕಾರಣಗಳು ಸತ್ಯಕ್ಕೆ ದೂರವಾದ ಕಾರಣಗಳು ಎಂಬುದು ಗೊತ್ತಾಗುತ್ತದೆ.

ಕೇರಳದ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಮತ್ತು ಇತರ ಹೈಕೋರ್ಟ್ ಗಳಲ್ಲಿ ಸಮಾನವಾಗಿ ಪ್ರತಿನಿಧಿಸುತ್ತಾರೆ. ಒಬ್ಬ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಮೂವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಕೇರಳದಿಂದ ಬಂದವರಾಗಿದ್ದಾರೆ.

ಆದರೆ ಭಾರತದಲ್ಲಿರುವ 24 ಹೈಕೋರ್ಟ್ ಗಳಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯ ನ್ಯಾಯಮೂರ್ತಿಗಳನ್ನು ಹೊಂದಿರುವ ರಾಜ್ಯ ಕೇರಳ ಮಾತ್ರವಲ್ಲ. ಬಾಂಬೆ, ರಾಜಸ್ತಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಸಹ ಇಬ್ಬಿಬ್ಬರು ಮುಖ್ಯ ನ್ಯಾಯಮೂರ್ತಿಗಳಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಕೇರಳದ ಓರ್ವ ನ್ಯಾಯಾಧೀಶ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಇದ್ದಾರೆ. ಆದರೆ ಸುಪ್ರೀಂ ಕೋರ್ಟ್ ನಲ್ಲಿ ಒಂದಕ್ಕಿಂತ ಹೆಚ್ಚು ನ್ಯಾಯಾಧೀಶರುಗಳನ್ನು ಹೊಂದಿರುವ ರಾಜ್ಯಗಳು ಆಂಧ್ರಪ್ರದೇಶ, ದೆಹಲಿ, ಅಲಹಾಬಾದ್, ಮಧ್ಯ ಪ್ರದೇಶ ಮತ್ತು ಕರ್ನಾಟಕಗಳಿವೆ. ಈ ರಾಜ್ಯಗಳ ತಲಾ ಇಬ್ಬರು ನ್ಯಾಯಾಧೀಶರು ಸುಪ್ರೀಂ ಕೋರ್ಟ್ ನಲ್ಲಿದ್ದರೆ, ಮುಂಬೈಯ ಮೂವರು ನ್ಯಾಯಾಧೀಶರು ಸುಪ್ರೀಂ ಕೋರ್ಟ್ ನಲ್ಲಿದ್ದಾರೆ.

ಈ ಹಿಂದಿನ ನೇಮಕಾತಿ ಪ್ರಕಾರ ನೋಡುವುದಾದರೆ ಸೇವಾ ಹಿರಿತನ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರ ಬಡ್ತಿಗೆ ಹಿನ್ನಡೆಯಾಗಲಿಕ್ಕಿಲ್ಲ. ಉದಾಹರಣೆಗೆ ಈಗಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮೋಹನ್ ಎಂ ಶಾಂತನಗೌಡರ್ ಮತ್ತು ಎಸ್ ಅಬ್ದುಲ್ ನಾಸೀರ್ ಅವರನ್ನು ಸುಪ್ರೀಂ ಕೋರ್ಟ್ ಗೆ ಬಡ್ತಿ ನೀಡಿ ವರ್ಗಾಯಿಸುವ ಸಂದರ್ಭದಲ್ಲಿ ಅವರು ಸೇವೆಯಲ್ಲಿ ಹಿರಿಯರಾಗಿರಲಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಅವರು 20 ನ್ಯಾಯಾಧೀಶರನ್ನು ಸೇವಾ ಹಿರಿತನದಲ್ಲಿ ಹಿಂದಿಕ್ಕಿ ಬಡ್ತಿ ಪಡೆದಿದ್ದರು.

ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶ ನ್ಯಾಯಮೂರ್ತಿ ನಾಸಿರ್ ಕಳೆದ ಎರಡು ದಶಕಗಳಲ್ಲಿ ಸೇವಾ ಹಿರಿತನವಿಲ್ಲದೆ ಬಡ್ತಿ ಪಡೆದ ಮೊದಲ ನ್ಯಾಯಾಧೀಶರಾಗಿದ್ದಾರೆ. ಆ ಸಮಯದಲ್ಲಿ ಸುಪ್ರೀಂ ಕೋರ್ಟ್ ನ ಕೊಲ್ಜಿಯಂ ಇಬ್ಬರು ಹಿರಿಯ ನ್ಯಾಯಾಧೀಶರನ್ನು ಹಿಂದಿಕ್ಕಿ ಸುಪ್ರೀಂ ಕೋರ್ಟ್ ಗೆ ವರ್ಗಾಯಿಸಿದ್ದರು. ಅದನ್ನು ಆಗ ರಾಷ್ಟ್ರಪತಿಗಳು ಮತ್ತು ಕಾನೂನು ಸಚಿವಾಲಯ ಕೂಡ ಒಪ್ಪಿತ್ತು.

ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾಯಾಧೀಶ ರಂಜನ್ ಗೊಗೊಯ್ ಕೂಡ ಸುಪ್ರೀಂ ಕೋರ್ಟ್ ಗೆ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕೂರ್, ಕುರಿಯನ್ ಜೋಸೆಫ್  ಮತ್ತು ಎಕೆ ಸಿಕ್ರಿ ಅವರಿಗಿಂತ ಮೊದಲು ಬಡ್ತಿ ಪಡೆಯುತ್ತಿದ್ದಾರೆ.

2010ರಲ್ಲಿ ಕೆ ಜಿ ಬಾಲಕೃಷ್ಣನ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ನಂತರ ಎಸ್ ಸಿ/ಎಸ್ ಟಿ ಸಮುದಾಯಕ್ಕೆ ಸೇರಿದ ಯಾವುದೇ ನ್ಯಾಯಾಧೀಶರು ನೇಮಕಗೊಳ್ಳಲಿಲ್ಲ. ಇದುವರೆಗೆ ಕೆಜಿ ಬಾಲಕೃಷ್ಣ ಅವರು ಮಾತ್ರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು.

ಇನ್ನು ಭಾರತದ ಯಾವುದೇ ಹೈಕೋರ್ಟ್ ಗಳಲ್ಲಿ ದಲಿತ ಮುಖ್ಯ ನ್ಯಾಯಮೂರ್ತಿಗಳಿಲ್ಲ.ಮೇಲಿನ ನ್ಯಾಯಾಂಗಗಳಲ್ಲಿ ಜಾತಿ ಆಧಾರಿತ ಮೀಸಲಾತಿ ಇಲ್ಲವೆಂಬ ನಿಯಮವಿದ್ದರೂ ಕೂಡ ಅಲ್ಪಸಂಖ್ಯಾತರಿಗೆ ಸಮಾನ ಪ್ರಾತಿನಿಧ್ಯ ನೀಡಬೇಕೆಂಬ ನಿಯಮವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com