ನವದೆಹಲಿ: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ(ಎನ್‌ಸಿಬಿಸಿ)ಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಹತ್ವದ ವಿಧೇಯಕವನ್ನು ಗುರುವಾರ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು.
ಲೋಕಸಭೆಯಲ್ಲಿ ಇಂದು 2017ರ 123ನೇ ಸಂವಿಧಾನ ತಿದ್ದುಪಡಿ ಮಸೂದೆಯ ಮೇಲೆ ಐದು ಗಂಟೆಗಳ ಚರ್ಚೆಯ ಬಳಿಕ ಮೂರನೇ ಎರಡಂಶಕ್ಕಿಂತಲೂ ಅಧಿಕ ಬಹುಮತದಿಂದ ವಿಧೇಯಕನ್ನು ಪಾಸ್ ಮಾಡಲಾಯಿತು.
ಮತದಾನದ ವೇಳೆ ಸದನದಲ್ಲಿ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಸೂದೆಯನ್ನು ಯಶಸ್ವಿಯಾಗಿ ನಿಭಾಯಿಸಿ ಪಾಸುಗೊಳಿಸಿದ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವ ಥಾವರಚಂದ್ ಗೆಹ್ಲೋಟ್ ಅವರನ್ನು ಅಭಿನಂದಿಸಿದರು.
ಚರ್ಚೆಯ ವೇಳೆ ಕೆಲವು ಸದಸ್ಯರು 2014ರ ಸಾಮಾಜಿಕ - ಆರ್ಥಿಕ ಸಮೀಕ್ಷೆಯ ವರದಿಯನ್ನು ಬಹಿರಂಗಗೊಳಿಸಬೇಕೆಂದು ಆಗ್ರಹಿಸಿದರೆ ಇನ್ನು, ಕೆಲವರು ದೇಶದಲ್ಲಿನ ಒಬಿಸಿ ಜನಸಂಖ್ಯೆಯನ್ನು ನಿರ್ಧರಿಸಲು ಜನಗಣತಿ ನಡೆಸಬೇಕೆಂದು ಒತ್ತಾಯಿಸಿದರು.