ಮಂಕಾದ ರಾಹುಲ್ ಗಾಂಧಿ ಪ್ರಧಾನಿ ಆಸೆ, ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ನಿರ್ಧಾರ ಎಂದ ಕಾಂಗ್ರೆಸ್

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಧಾನಿ ಹುದ್ದೆಯ ಆಸೆ ಮೇಲೆ ಇದೀಗ ಕರಿ ನೆರಳು ಬಿದ್ದಂತೆ ಕಾಣುತ್ತಿದ್ದು, ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಧಾನಿ ಹುದ್ದೆಯ ಆಸೆ ಮೇಲೆ ಇದೀಗ ಕರಿ ನೆರಳು ಬಿದ್ದಂತೆ ಕಾಣುತ್ತಿದ್ದು, ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ.
ಈ ಹಿಂದೆ ರಾಹುಲ್ ಗಾಂಧಿ ಅವರನ್ನೇ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿತ್ತಾದರೂ ಬದಲಾದ ಪರಿಸ್ಥಿತಿ ಮತ್ತು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಅವರ ರಣತಂತ್ರವನ್ನು ಹಣಿಯುವ ಉದ್ದೇಶದಿಂದ ಚುನಾವಣೆಗೂ ಮುನ್ನವೇ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡದಿರಲು ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಮೂಲಗಳು ಅಭಿಪ್ರಾಯಪಟ್ಟಿರುವಂತೆ ರಾಹುಲ್ ಗಾಂಧಿ ಅವರನ್ನು ಚುನಾವಣೆಗೂ ಮೊದಲೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸದಿರುವುದೇ ಒಳ್ಳೆಯದು ಎಂಬ ಅಭಿಪ್ರಾಯ ಮೂಡಿದೆ. 
ಅಲ್ಲದೆ ಮೋದಿ ಮತ್ತು ಅಮಿತ್ ಶಾ ಅವರನ್ನು ಮಣಿಸಲೆಂದೇ ತಲೆ ಎತ್ತಿ ನಿಂತಿರುವ ಮಹಾ ಘಟ್ ಬಂಧನ್ ಮೈತ್ರಿಕೂಟದಲ್ಲೂ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಪಸ್ಪರ ಎದ್ದಿದೆ ಎನ್ನಲಾಗಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಪಕ್ಷದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಆರ್ ಜೆಡಿಯ ಲಾಲು ಪ್ರಸಾದ್ ಯಾದವ್, ಜೆಡಿಯು ಪಕ್ಷದ ಶರದ್ ಯಾದವ್ ಅವರ ಹೆಸರುಗಳು ಬಲವಾಗಿ ಕೇಳಿಬರುತ್ತಿದೆ.
ಒಂದು ವೇಳೆ ಕಾಂಗ್ರೆಸ್ ಪಕ್ಷವೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಆಗ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಣೆ ಮಾಡಬಹುದಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ಮೈತ್ರಿಯಾಗದ ಹೊರತು ಬಿಜೆಪಿ ಮಣಿಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅನಿವಾರ್ಯವಾಗಿ ಕಾಂಗ್ರೆಸ್ ತನ್ನ ಮೈತ್ರಿ ಪಕ್ಷಗಳ ಸಲಹೆಗಳನ್ನು ಪಾಲಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com