ಜಮ್ಮು-ಕಾಶ್ಮೀರ: ಸೇನೆಯಿಂದ ಗುಂಡಿನ ದಾಳಿ- ಜಾನುವಾರು ವ್ಯಾಪಾರಿ ಸಾವು, ಓರ್ವ ವ್ಯಕ್ತಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ರಂಬನ್ ಎಂಬ ಜಿಲ್ಲೆಯಲ್ಲಿ ಸೇನೆ ನಡೆಸಿದ್ದ ಗುಂಡಿನ ದಾಳಿಗೆ ಜಾನುವಾರು ವ್ಯಾಪಾರಿ ಸಾವನ್ನಪ್ಪಿ, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬನಿಹಾಲ್: ಜಮ್ಮು ಮತ್ತು ಕಾಶ್ಮೀರದ ರಂಬನ್ ಎಂಬ ಜಿಲ್ಲೆಯಲ್ಲಿ ಸೇನೆ ನಡೆಸಿದ್ದ ಗುಂಡಿನ ದಾಳಿಗೆ ಜಾನುವಾರು ವ್ಯಾಪಾರಿ ಸಾವನ್ನಪ್ಪಿ, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ. 
ಮೊಹಮ್ಮದ್ ರಫೀಕ್ ಗುಜ್ಜರ್ (28) ಸಾವನ್ನಪ್ಪಿದ್ದ ಜಾನುವಾರು ವ್ಯಾಪಾರಿಯಾಗಿದ್ದು, ಶಕೀಲ್ ಅಹ್ಮದ್ (30) ಗಾಯಗೊಂಡ ವ್ಯಕ್ತಿಯಾಗಿದ್ದಾನೆ. 
ಇಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಗುಜ್ಜರ್ ಹಾಗೂ ಶಕೀಲ್ ಇಬ್ಬರೂ ಕೊಹ್ಲಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ 58 ರಾಷ್ಟ್ರೀಯ ರೈಫಲ್ಸ್ ಪಡೆ ಗುಂಡಿನ ದಾಳಿ ನಡೆಸಿದ್ದು, ಗುಜ್ಜರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಗಾಯಗೊಂಡಿದ್ದ ಶಕೀಲ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 
ಗುಜ್ಜರ್ ಹಾಗೂ ಶಕೀಲ್ ಇಬ್ಬರೂ ಜಾನುವಾರು ವ್ಯಾಪಾರಿಗಳಾಗಿದ್ದು, ವ್ಯವಹಾರ ನಿಮಿತ್ತ ಗ್ರಾಮಕ್ಕೆ ಬಂದಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. 
ಘಟನೆ ಕುರಿತಂತೆ ರಂಬಾನ್ ಪೊಲೀಸ್ ಅಧಿಕಾರಿ ಹೇಳಿಕೆ ನೀಡಿದ್ದು, ನಾಗರೀಕನ ಸಾವು ಹಾಗೂ ವ್ಯಕ್ತಿ ಗಾಯಗೊಂಡಿರುವುದನ್ನು ದೃಢಪಡಿಸಿದ್ದಾರೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸೇನಾಧಿಕಾರಿಗಳು, ಕೆಲ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಯೋಧರು ಗುಂಡಿನ ದಾಳಿ ನಡೆಸಿದ್ದರು ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com