ಹಿಮಾಚಲಪ್ರದೇಶದಲ್ಲಿದ್ದ ರಾಜ್ಯದ ಮಹಿಳೆ ವಾಪಸ್ಸಾಗುವುದಕ್ಕೆ ಕಾರ್ಯಾಚರಣೆ ನಡೆದಿದ್ದು ಹೇಗೆ ಗೊತ್ತೇ?

ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಸಿದ್ದರೆ, ದೇಶ, ಭಾಷೆ, ಪರಿಸ್ಥಿತಿ ಇದ್ಯಾವುದೂ ಅಡ್ಡಿಯಾಗುವುದಿಲ್ಲ, ಎಂತಹ ಸಮಸ್ಯೆಯನ್ನು ಬೇಕಾದರೂ ಪರಿಹರಿಸಬಹುದು ಎಂಬುದಕ್ಕೆ ದೃಶ್ಯ ಮಾಧ್ಯಮ ಜಗತ್ತಿನ ಈ ಕಾರ್ಯಾಚರಣೆ
ಹಿಮಾಚಲಪ್ರದೇಶದಲ್ಲಿದ್ದ ರಾಜ್ಯದ ಮಹಿಳೆ
ಹಿಮಾಚಲಪ್ರದೇಶದಲ್ಲಿದ್ದ ರಾಜ್ಯದ ಮಹಿಳೆ
ಬೆಂಗಳೂರು: ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಸಿದ್ದರೆ, ದೇಶ, ಭಾಷೆ, ಪರಿಸ್ಥಿತಿ ಇದ್ಯಾವುದೂ ಅಡ್ಡಿಯಾಗುವುದಿಲ್ಲ, ಎಂತಹ ಸಮಸ್ಯೆಯನ್ನು ಬೇಕಾದರೂ ಪರಿಹರಿಸಬಹುದು ಎಂಬುದಕ್ಕೆ ದೃಶ್ಯ ಮಾಧ್ಯಮ ಜಗತ್ತಿನ ಈ ಕಾರ್ಯಾಚರಣೆ ಅತ್ಯುತ್ತಮ ಉದಾಹರಣೆ. 
ಕಳೆದ 2 ವರ್ಷಗಳಿಂದ ಹಿಮಾಚಲ ಹಿಮಾಚಲ ಪ್ರದೇಶದ ಶಿಮ್ಲಾದ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಕೇಂದ್ರದಲ್ಲಿರುವ ಕರ್ನಾಟಕದ ಮಹಿಳೆ ಈಗ ತವರು ರಾಜ್ಯಕ್ಕೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ತನ್ನವರು ಗುರುತು ಪರಿಚಯ ಇಲ್ಲದವರ ನಡುವೆ 2 ವರ್ಷಗಳ ಕಾಲ ಜೀವಿಸಿದ್ದ ಆಕೆಯ ನೋವಿಗೆ ಈಗ ಸ್ವಲ್ಪ ಮಟ್ಟಿಗಿನ ನೆಮ್ಮದಿ ಸಿಕ್ಕಿದೆ. ಸಂಕಷ್ಟಕ್ಕೆ ಸ್ಪಂದಿಸಿ, ಎರಡೂ ಸರ್ಕಾರಗಳ ಗಮನಕ್ಕೆ ತಂದು ಆಕೆಯನ್ನು ತನ್ನ ಊರಿಗೆ ಸೇರಿಸುವುದಕ್ಕೆ ಸಾಧ್ಯವಾಗಿದ್ದು ಕನ್ನಡದ ಖಾಸಗಿ ಸುದ್ದಿ ವಾಹಿನಿಯ ಕಾರ್ಯಾಚರಣೆಯಿಂದ. ಅಸಲಿಗೆ ಈ ಮಹಿಳೆ ತನ್ನವರಲ್ಲದ ಮಧ್ಯದಲ್ಲಿ ಸಿಲುಕಿಕೊಂಡು ಅನುಭವಿಸುತ್ತಿದ್ದ ಯಾತನೆಯನ್ನು ಮೊದಲು ಗುರುತಿಸಿದ್ದು ಒಂದು ಎನ್ ಜಿಒ. 
ಶಿಮ್ಲಾದ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ ಕರಕುಶಲ ತರಬೇತಿ ನೀಡುವುದಕ್ಕೆ ತೆರಳಿದ್ದ ಎನ್ ಜಿಒ ಸದಸ್ಯರೊಂದಿಗೆ ಅಲ್ಲಿದ್ದ ಎಲ್ಲರೂ ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲೇ ಮಾತನಾಡುತ್ತಿರುತ್ತಾರೆ. ಆದರೆ ಕರ್ನಾಟಕದ ಮಹಿಳೆಯ ಭಾಷೆಯನ್ನು ಕೇಳಿದ ಎನ್ ಜಿಒ ಸದಸ್ಯರಿಗೆ ಇದು ದಕ್ಷಿಣ ಭಾರತದ ಯಾವುದೋ ಭಾಷೆ ಇದ್ದಿರಬೇಕು ಎನಿಸುತ್ತದೆ. ತಕ್ಷಣವೇ ಎನ್ ಜಿಒ ದಲ್ಲಿ ಸಕ್ರಿಯರಾಗಿದ್ದ ಸದಸ್ಯರೊಬ್ಬರು ತಮ್ಮ ಸ್ನೇಹಿತರಾದ ಕನ್ನಡ ಕನ್ನಡದ ಖಾಸಗಿ ಸುದ್ದಿ ವಾಹಿನಿಯ ದೆಹಲಿ ವಿಭಾಗದ ಮುಖ್ಯಸ್ಥರಾಗಿರುವ ಸ್ವಾತಿ ಚಂದ್ರಶೇಖರ್ ಅವರಿಗೆ ವಿಷಯ ತಿಳಿಸಿ ಆ ಮಹಿಳೆಯ ಭಾಷೆಯನ್ನು ಗುರಿತಿಸಲು ಸಾಧ್ಯವೇ? ಎಂದು ಕೇಳುತ್ತಾರೆ. ದೆಹಲಿಯಲ್ಲಿದ್ದ ಮಾಧ್ಯಮ ಪ್ರತಿನಿಧಿ ಹಿಮಾಚಲ ಪ್ರದೇಶಕ್ಕೆ ತೆರಳಿ ಆಸ್ಪತ್ರೆ ಮುಖ್ಯಸ್ಥರಾದ ಸಂಜಯ್ ಪಠಾಕ್ ಅವರನ್ನು ಭೇಟಿ ಮಾಡಿ ಮಾತನಾಡುತ್ತಾರೆ. ನಂತರ ಆ ಮಹಿಳೆಯೊಂದಿಗೆ ಮಾತನಾಡಿದಾಗ ತಿಳಿದಿದ್ದು ಆಕೆ ಕರ್ನಾಟಕದವರೆಂದು. ಹಿಮಾಚಲ ಪ್ರದೇಶದಲ್ಲಿದ್ದ, ಮೂಲತಃ ಮೈಸೂರಿನ ಮಹಿಳೆಯನ್ನು ರಾಜ್ಯಕ್ಕೆ ಕರೆತರಲು ಪ್ರಾರಂಭವಾದ ಕಾರ್ಯಾಚರಣೆ ಪ್ರಾರಂಭವಾಗಿದ್ದು ಹೀಗೆ. 
ಎನ್ ಜಿಒ ನಡೆಸುತ್ತಿದ್ದ ಕರಕುಶಲ ತರಬೇತಿಯ ಸಮಾರೋಪ ಸಮಾರಂಭಕ್ಕೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಇದೇ ವೇಳೆ ಎನ್ ಜಿಒ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದ ಕನ್ನಡ ಸುದ್ದಿ ವಾಹಿನಿಯ ದೆಹಲಿ ವಿಭಾಗದ ಮುಖ್ಯಸ್ಥರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳಿಗೆ ಶಿಮ್ಲಾದಲ್ಲಿದ್ದ ಕರ್ನಾಟಕ ಮಹಿಳೆಯ ಪರಿಸ್ಥಿತಿಯನ್ನು ವಿವರಿಸಲಾಯಿತು. ಕರ್ನಾಟಕದವರೇ ಆದ ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳ ಪತ್ನಿ ಸಹ ಮೈಸೂರು ಮೂಲದ ಮಹಿಳೆಯ ಬಗ್ಗೆ ಕೇಳಿ ಅಚ್ಚರಿಗೊಂಡರು. ಆ ಮಹಿಳೆಯನ್ನು ವಾಪಸ್ ರಾಜ್ಯಕ್ಕೆ ಕರೆಸಿಕೊಳ್ಳುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿ, ಆ ಮಹಿಳೆಗೆ ಸೂಕ್ತ ಆಶ್ರಯ ನೀಡುವುದಿದ್ದರೆ ಅದಕ್ಕೆ ಶೀಘ್ರವೇ ಸ್ಪಂದಿಸುವುದಾಗಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳೂ ಭರವಸೆ ನೀಡಿದರು.
ಈ ಮಾಹಿತಿಯನ್ನು ಅಂದಿನ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತರಲಾಗಿತ್ತು. ಆದರೆ ಈ ನಡುವೆ 2018 ರ ಚುನಾವಣೆಯ ಕಾರಣದಿಂದಾಗಿ ಆಡಳಿತ ಯಂತ್ರ ಆ ವಿಷಯದತ್ತ ಹೆಚ್ಚು ಗಮನ ಹರಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಮೇ ತಿಂಗಳಲ್ಲಿ ಚುನಾವಣೆ ಮುಗಿಯಿತಾದರೂ ರಾಜಕೀಯ ಹಗ್ಗ ಜಗ್ಗಾಟಗಳಿಂದ ಸರ್ಕಾರ ಟೇಕ್ ಆಫ್ ಆಗುವುದಕ್ಕೇ ಒಂದೆರಡು ತಿಂಗಳು ಬೇಕಾಯಿತು. ಈ ನಡುವೆ ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ದೆಹಲಿಗೆ ಭೇಟಿ ನೀಡಿದ್ದಾಗ ದೆಹಲಿ ಪ್ರತಿನಿಧಿಯಾಗಿರುವ ಸ್ವಾತಿ ಚಂದ್ರಶೇಖರ್ ಒಮ್ಮೆ ಈ ವಿಷಯವನ್ನು ಗಮನಕ್ಕೆ ತಂದಿದ್ದರಾದರೂ ತಕ್ಷಣ ಪ್ರಯೋಜನವಾಗಿರಲಿಲ್ಲ. ಆದರೆ ಎರಡನೇ ಬಾರಿಗೆ ಮತ್ತೊಮ್ಮೆ ಈ ವಿಷಯವನ್ನು ಕುಮಾರಸ್ವಾಮಿ ಗಮನಕ್ಕೆ ತರಲಾಯಿತು. ಈ ಬಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಮೈಸೂರು ಮೂಲದ ಮಹಿಳೆಯನ್ನು ರಾಜ್ಯಕ್ಕೆ ಕರೆಸಿಕೊಳ್ಳುವುದಕ್ಕಾಗಿ ಹಿಮಾಚಲ ಪ್ರದೇಶ ಸರ್ಕಾರದೊಂದಿಗೆ ಪ್ರಕ್ರಿಯೆಗೆ ಮುಂದಾಯಿತು. ಮಾಧ್ಯಮದ ಈ ಕಾಳಜಿಗೆ ಸ್ವತಃ ಸಿಎಂ ಕುಮಾರಸ್ವಾಮಿ, ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದರು. ಮೈಸೂರು ಮೂಲದ ಮಹಿಳೆಯನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳು ಸಾಂಸ್ಕೃತಿಕವಾಗಿ ಬೀಳ್ಕೊಟ್ಟದ್ದು ಮತ್ತೊಂದು ವಿಶೇಷವಾಗಿತ್ತು.
ಸಮಸ್ಯೆಯನ್ನು ಪರಿಹರಿಸುವುದಕ್ಕೆದೇಶ, ಭಾಷೆ, ಪರಿಸ್ಥಿತಿ ಇದ್ಯಾವು ದೂ ಅಡ್ಡಿಯಾಗುವುದಿಲ್ಲ, ಸರ್ಕಾರದ ಸಹಕಾರದಿಂದ ಎಂತಹ ಸಮಸ್ಯೆಯನ್ನು ಬೇಕಾದರೂ ಪರಿಹರಿಸಬಹುದು ಎಂಬುದಕ್ಕೆ ಮಾಧ್ಯಮದ ಈ ಕಾರ್ಯಾಚರಣೆ ಎಂದಿಗೂ ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com