ಸಂಸತ್ತಿನಲ್ಲಿ ಎಸ್‌ಸಿ/ಎಸ್‌ಟಿ ಕಾಯಿದೆ ಪುನರ್‌ ಸ್ಥಾಪಿಸುವ ಮಸೂದೆ ಅಂಗೀಕಾರ

ಎಸ್‌ಸಿ/ಎಸ್‌ಟಿ ಕಾಯಿದೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂಬ ದಲಿತ ಸಂಘಟನೆಗಳ ಆರೋಪದ ಹಿನ್ನಲೆಯಲ್ಲಿ ಅದನ್ನು....
ಸಂಸತ್ತು
ಸಂಸತ್ತು
ನವದೆಹಲಿ: ಎಸ್‌ಸಿ/ಎಸ್‌ಟಿ ಕಾಯಿದೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂಬ ದಲಿತ ಸಂಘಟನೆಗಳ ಆರೋಪದ ಹಿನ್ನಲೆಯಲ್ಲಿ ಅದನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ್ದ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಮಸೂದೆ 2018 ಅನ್ನು ಗುರುವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.
ಈ ಮಸೂದೆಯನ್ನು ಈಗಾಗಲೇ ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ ನಂತರ ಕಾನೂನು ಜಾರಿಗೆ ಬರಲಿದೆ.
ಇಂದು ರಾಜ್ಯಸಭೆಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ನ್ಯಾಯ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರು, ನರೇಂದ್ರ ಮೋದಿ ಸರ್ಕಾರ ದಲಿತ ಕಲ್ಯಾಣಕ್ಕೆ ಮತ್ತು ಬಡವರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದರು. ಅಲ್ಲದೆ ಯಾವುದೇ ಒತ್ತಡಕ್ಕೆ ಮಣಿದು ಈ ಮಸೂದೆಯನ್ನು ಮಂಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾಗುವ ಪ್ರಕರಣದಲ್ಲಿ ತನಿಖಾಧಿಕಾರಿ ಯಾರ ಒಪ್ಪಿಗೆಯೂ ಇಲ್ಲದೆಯೇ ಆರೋಪಿಯನ್ನು ಬಂಧಿಸಲು ಮತ್ತು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಪ್ರಾಥಮಿಕ ವಿಚಾರಣೆಯ ಅಗತ್ಯವಿಲ್ಲ.
ಸುಪ್ರೀಂ ಕೋರ್ಟ್ ಮಾರ್ಚ್ 20ರಂದು, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಆರೋಪಿಗಳನ್ನು ಬಂಧಿಸಲು ಹಿರಿಯ ಪೊಲೀಸ್ ಅಧಿಕಾರಿಯ ಒಪ್ಪಿಗೆ ಅಗತ್ಯ ಮತ್ತು ಪ್ರಕರಣ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಬರುತ್ತದೆಯೇ ಎಂಬ ಬಗ್ಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು ಎಂದು ಹೇಳಿತ್ತು. 
ಸರ್ವೋಚ್ಚ ನ್ಯಾಯಾಲಯದ ಈ ಆದೇಶಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತಪಡಿಸಿದ ದಲಿತಪರ ಸಂಘಟನೆಗಳು, ದೇಶ ವ್ಯಾಪಿ ಬಂದ್‌ಗೆ ಕರೆ ನೀಡಿ, ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com