ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಕಿತ್ತುಹಾಕಲು ಬಂದಿದ್ದೇವೆ: ಅಮಿತ್ ಶಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಬೇರು ಸಮೇತ ಕಿತ್ತುಹಾಕಲು ನಾವು...
ಅಮಿತ್ ಶಾ
ಅಮಿತ್ ಶಾ
ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಬೇರು ಸಮೇತ ಕಿತ್ತುಹಾಕಲು ನಾವು ಇಲ್ಲಿ ಬಂದಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.
ಇಂದು ಕೋಲ್ಕತಾದಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಶೀಘ್ರದಲ್ಲೇ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯಾಗಲಿದೆ. ವೋಟ್ ಬ್ಯಾಂಕ್ ಗಾಗಿ ಮಮತಾ ಬ್ಯಾನರ್ಜಿ ಎನ್ ಆರ್ ಸಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಮಗೆ ದೇಶ ಮೊದಲು. ನಂತರ ವೋಟ್ ಬ್ಯಾಂಕ್. ಹೀಗಾಗಿ ಎನ್ಆರ್ ಸಿ ಮೂಲಕ ಎಲ್ಲಾ ಅಕ್ರಮ ವಲೆಸಿಗರನ್ನು ದೇಶದಿಂದ ಹೊರ ಹಾಕಲಾಗುವುದು ಎಂದರು.
ಎನ್ ಆರ್ ಸಿ ಪ್ರಕ್ರಿಯೆಗೆ ನೀವು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ನಾವು ಅದನ್ನು ನಿಲ್ಲಿಸುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಈ ಮುನ್ನ ಪಶ್ಚಿಮ ಬಂಗಾಳದಲ್ಲಿ ಪ್ರತಿನಿತ್ಯ ರಬೀಂದ್ರ ಸಂಗೀತ ಆಲಿಸುತ್ತಿದ್ದೆವು, ಆದರೆ ಈಗ ಇಲ್ಲಿ ಕೇವಲ ಬಾಂಬ್‌ ಸ್ಫೋಟದ ಸದ್ದನ್ನು ಮಾತ್ರ ಕೇಳುತ್ತಿದ್ದೇವೆ ಎಂದು ದೀದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಾಂಗ್ಲಾ ನುಸುಳುಕೋರರನ್ನು ರಕ್ಷಿಸುತ್ತಿರುವುದೇಕೆ ಎಂದು ಮಮತಾ ಬ್ಯಾನರ್ಜಿರನ್ನು ಕೇಳಲು ಬಯಸುತ್ತೇವೆ. ಇದೇ ವಿಚಾರವಾಗಿ ಕಾಂಗ್ರೆಸ್ ರಾಹುಲ್‌ ಗಾಂಧಿ ಕೂಡ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿಲ್ಲ. ಕಾಂಗ್ರೆಸ್‌ನ ಮತ ಬ್ಯಾಂಕ್‌ ರಾಜಕಾರಣವೇ ಇವೆಲ್ಲಕ್ಕೂ ಕಾರಣ ಎಂದು ಅಮಿತ್ ಶಾ ಆರೋಪಿಸಿದರು.
ಅಮಿತ್‌ ಶಾ ಆಗಮನವನ್ನು ವಿರೋಧಿಸಿ ಬಿಜೆಪಿಯನ್ನು ಬಾಂಗ್ಲಾ ವಿರೋಧಿ ಎಂದು ಎಲ್ಲೆಡೆ ಭಿತ್ತಿಚಿತ್ರಗಳನ್ನು ಹಾಕಿದ್ದರ ಕುರಿತು ಮಾತನಾಡಿದ ಶಾ, 'ಬಿಜೆಪಿಯ ಸಂಸ್ಥಾಪಕ ಶ್ಯಾಮಪ್ರಸಾದ್‌ ಮುಖರ್ಜಿ ಖುದ್ದು ಬೆಂಗಾಲಿಯಾಗಿರುವಾಗ ಬಿಜೆಪಿ ಹೇಗೆ ಬಾಂಗ್ಲಾ ವಿರೋಧಿಯಾಗುತ್ತದೆ? ನಾವು ಬಾಂಗ್ಲಾ ವಿರೋಧಿಗಳಲ್ಲ, ಮಮತಾ ವಿರೋಧಿಗಳು' ಎಂದರು.
ನಮ್ಮ ರ‍್ಯಾಲಿಯನ್ನು ಜನರು ನೋಡದಂತೆ ಮಾಡಲು ಎಲ್ಲ ಬೆಂಗಾಲಿ ಚಾನೆಲ್‌ಗಳ ಸಿಗ್ನಲ್‌ಗಳನ್ನು ದುರ್ಬಲಗೊಳಿಸಲಾಗಿದೆ. ಈ ಮೂಲಕ ನಮ್ಮ ದನಿಯನ್ನು ಅಡಗಿಸಲು ಯತ್ನಿಸಲಾಗುತ್ತಿದೆ. ಆದರೆ ಪ್ರತಿ ಜಿಲ್ಲೆಗೂ ತೆರಳಿ ಟಿಎಂಸಿಯನ್ನು ಕಿತ್ತು ಹಾಕುತ್ತೇವೆ ಎಂದು ಅಮಿತ್ ಗುಡುಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com