ಕರುಣಾನಿಧಿ ಅಥವಾ ಜಯಲಲಿತಾ: ಯಾರಿಗೆ ಮೊದಲು ಭಾರತ ರತ್ನ ?

ಆಗಸ್ಟ್ 7 ರಂದು ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಸಿಗುವ ವಿಶ್ವಾಸದಲ್ಲಿದೆ ಡಿಎಂಕೆ.
ಎಂ. ಕರುಣಾನಿಧಿ, ಜಯಲಲಿತಾ
ಎಂ. ಕರುಣಾನಿಧಿ, ಜಯಲಲಿತಾ

ಚೆನ್ನೈ: ಆಗಸ್ಟ್ 7 ರಂದು  ನಿಧನರಾದ  ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ  ಪ್ರಶಸ್ತಿಯಾದ ಭಾರತ ರತ್ನ ಸಿಗುವ  ವಿಶ್ವಾಸದಲ್ಲಿದೆ ಡಿಎಂಕೆ.

ಕಳೆದ ಮೂರು ದಿನಗಳ ಹಿಂದೆ ಡಿಎಂಕೆ ಸಂಸದರು ಮತ್ತಿತರ ನಾಯಕರು ಬಿಜೆಪಿ ನಾಯಕರನ್ನು ಭೇಟಿ ಮಾಡಿ, ಶೀಘ್ರದಲ್ಲಿಯೇ  ಭಾರತ ರತ್ನ ಪ್ರಶಸ್ತಿ ಘೋಘಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯಸಭಾ ಸದಸ್ಯ, ಕರುಣಾನಿಧಿ ಪುತ್ರಿ ಕನ್ನಿಮೋಳಿ  ಇದನ್ನು ಮೊದಲು ಮುಗಿಸಲು ನಿರ್ಧರಿಸಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ಅಂತಿಮ ದಿನಗಳಲ್ಲಿ ಈ ವಿಚಾರದಲ್ಲಿ ಚಟುವಟಿಕೆಗಳು ಬಿರುಸುಗೊಂಡಿದ್ದವು.

2016  ಡಿಸೆಂಬರ್ ತಿಂಗಳಲ್ಲಿ  ನಿಧನರಾದ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ರಾಜಕೀಯ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಮೊದಲು ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆ ಪಕ್ಷದ ಎಲ್ಲಾ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ  ಬಹುಸಂಖ್ಯಾತ ಡ್ರಾವಿಡ  ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಕರುಣಾನಿಧಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಲ್ಪಟ್ಟರೆ ಏನು ಗತಿ ಎಂಬುದು  ಎಐಎಡಿಎಂಕೆಯಲ್ಲಿ ಭಯ ಸೃಷ್ಟಿಸಿದೆ.

ಬಿಜೆಪಿ ನಾಯಕರು ಅಂತಹ ಯಾವುದೇ ನಿರ್ಧಾರವನ್ನು ಘೋಷಿಸದಂತೆ  ಎಐಎಡಿಎಂಕೆ ನಾಯಕ ಡಾ. ವಿ. ಮೈತ್ರೇಯನ್ ಫೇಸ್ ಬುಕ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.

2016 ಡಿಸೆಂಬರ್ 5 ರಂದು ಜಯಲಲಿತಾ ನಿಧನರಾದ ಬಳಿಕ  29 ರಂದು ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಜಯಲಲಿತಾ ಅವರಿಗೆ ಭಾರತ ರತ್ನ ನೀಡುವಂತೆ  ಕೇಂದ್ರಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿತ್ತು. ಈ ಸಂಬಂಧ ರಾಜ್ಯ ಸಂಪುಟದಲ್ಲೂ ನಿರ್ಣಯ ಕೈಗೊಳ್ಳಲಾಗಿತ್ತು.

ಜಯಲಲಿತಾ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ 2017ರ ಜನವರಿ ಹಾಗೂ ಫೆಬ್ರವರಿಯಲ್ಲಿ ಎಐಎಡಿಎಂಕೆ ಸದಸ್ಯರು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾಪಿಸಿದ್ದರು.

ಜಯಲಲಿತಾ ನಿಧಿನರಾಗಿ 600 ದಿನ ಕಳೆದರೂ ಎಐಎಡಿಎಂಕೆ ಸದಸ್ಯರು , ಅಮ್ಮ ಅಭಿಮಾನಿಗಳು, ಹಾಗೂ ತಮಿಳುನಾಡು ಜನರು ಕೇಂದ್ರಸರ್ಕಾರ ಯಾವಾಗ ಭಾರತ ರತ್ನ ನೀಡಲಿದ್ದೆಯೋ ಎಂದು ಉತ್ಸಹದಿಂದ ಕಾಯುತ್ತಿದ್ದಾರೆ.  ತಮಿಳುನಾಡಿನಲ್ಲಿನ ಅವಳಿ ಪಕ್ಷಗಳ ರಾಜಕೀಯ ದೆಹಲಿ ಅಂಗಳ ತಲುಪಿದೆ. ಈ ಸಮಸ್ಯೆಯನ್ನು ಪ್ರಧಾನಿ ನರೇಂದ್ರಮೋದಿ ಹೇಗೆ ಬಗೆಹರಿಸಲಿದ್ದಾರೆ ಎಂಬುದು ತೀವ್ರ  ಕುತೂಹಲ ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com