ಎನ್ಆರ್'ಸಿ ನಮ್ಮ ಭರವಸೆ, ಯಾವೊಬ್ಬ ಭಾರತೀಯ ದೇಶ ಬಿಡುವ ಅಗತ್ಯವಿಲ್ಲ: ಪ್ರಧಾನಿ ಮೋದಿ

ಎನ್ಆರ್'ಸಿ ನಮ್ಮ ಭರವಸೆಯಾಗಿದ್ದು, ಯಾವೊಬ್ಬ ಭಾರತೀಯನೂ ದೇಶ ಬಿಡುವ ಅಗತ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on
ನವದೆಹಲಿ: ಎನ್ಆರ್'ಸಿ ನಮ್ಮ ಭರವಸೆಯಾಗಿದ್ದು, ಯಾವೊಬ್ಬ ಭಾರತೀಯನೂ ದೇಶ ಬಿಡುವ ಅಗತ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. 
ಸುದ್ದಿ ಸಂಸ್ಥೆಯೊಂದು ನಡೆಸಿದ ಸಂದರ್ಶನದಲ್ಲಿ ದೇಶದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಅಸ್ಸಾಂ ಎನ್ಆರ್'ಸಿ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸುವ ಅವರು, ಭಾರತದ ಯಾವುದೇ ನಾಗರೀಕರು ಕೂಡ ದೇಶವನ್ನು ತ್ಯಜಿಸಬೇಕಾಗಿಲ್ಲ ಎಂದು ನಾನು ನಾಗರಿಕರಿಗೆ ಭರವಸೆ ನೀಡುತ್ತೇನೆ. ಅಸ್ಸಾಂ ಜನರ ಕಳವಳವನ್ನು ನಿವಾರಿಸಲು ಎಲ್ಲಾ ರೀತಿಯ ಅವಕಾಶಗಳನ್ನು ನೀಡಲಾಗುವುದು ಭಯಪಡಬೇಕಾಗಿಲ್ಲ ಎಂದು ಅಭಯವನ್ನು ನೀಡಿದ್ದಾರೆ. 
ಬಳಿಕ ಸಾಮೂಹಿಕ ಹಲ್ಲೆ ಪ್ರಕರಣಗಳ ಕುರಿತಂತೆ ಮಾತನಾಡಿದ ಅವರು, ದೇಶದಲ್ಲಿ ಶಾಂತಿ, ಐಕ್ಯತೆ ನೆಲೆಸುವ ಸಲುವಾಗಿ ವಿರೋಧ ಪಕ್ಷಗಳು ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡಬಾರದು. ಜನರ ಗುಂಪು ಅಮಾಯಕರನ್ನು ಬಡಿದು ಹತ್ಯೆ ಮಾಡಿ ಘಟನೆ ಅಥವಾ ಮಹಿಳೆಯರ ಮೇಲಿನ ಒಂದೇ ಒಂದು ದೌರ್ಜನ್ಯದ ಘಟನೆಯೂ ಕಳವಳಕಾರಿ ಹಾಗೂ ದುರಾದೃಷ್ಟಕರ. ಸಮಾಜದ ಶಾಂತಿ ಹಾಗೂ ಏಕತೆಯನ್ನು ಕಾಪಾಡಿಸಿಕೊಳ್ಳುವ ನಿಟ್ಟಿನಿಂದ ಪ್ರತಿಯೊಬ್ಬರನ್ನು ಪಕ್ಷಾತೀತವಾಗಿ ಕೈಜೋಡಿಸಬೇಕಿದೆ ಎಂದು ಹೇಳಿದ್ದಾರೆ. 
ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ನಾನು ವಿನಮ್ರ ಕೆಲಸಗಾರ (ಕಾಮದಾರ್). ನನ್ನನ್ನು ತಮ್ಮದೇ ಆದ ವಿಶಿಷ್ಟ ಸೈಲಿ ಹೊಂದಿರುವ ನಾಮದಾರ್ ಗಳ (ವಂಶಪಾರಂಪರ್ಯದಿಂದ ಬಂದವರು) ಜೊತೆಗೆ ಹೋಲಿಕೆ ಮಾಡಲೇಬೇಡಿ. ಅವರಿಗೆ ಯಾರನ್ನು ದ್ವೇಷಿಸಬೇಕು? ಯಾವಾಗ ದ್ವೇಷಿಸಬೇಕು? ಯಾವಾಗ ಪ್ರೀತಿಸಬೇಕು? ಯಾವಾಗ ಈ ಪ್ರೀತಿಯನ್ನು ಬಹಿರಂಗವಾಗಿ ಪ್ರದರ್ಶಿಸಬೇಕೆಂಬುದು ಗೊತ್ತಿದೆ ಎಂದು ತಿಳಿಸಿದ್ದಾರೆ.  
ಬಿಜೆಪಿ ಮೈತ್ರಿ ಕೂಟದ ಸಣ್ಣಪುಟ್ಟ ಪಕ್ಷಗಳು ಸರ್ಕಾರದಲ್ಲಿ ವಿಶ್ವಾಸ ಕಳೆದುಕೊಂಡಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮೋದಿಯವರು ರಾಜ್ಯಸಭೆಯಲ್ಲಿ ಉಪಸಭಾಪತಿಯ ಆಯ್ಕೆ ಮತ್ತು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಆದ ಸೋಲು. ಈ ಎರಡೂ ಘಟನೆಗಳು ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತವೆ ಎಂದಿದ್ದಾರೆ. 
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಕಣ್ಣು ಹೊಡೆದ ಬಗ್ಗೆ ಇದೇ ವೇಳೆ ವ್ಯಂಗ್ಯವಾಡಿರುವ ಅವರು, ರಾಹುಲ್ ಗಾಂಧಿ ಅವರು ನನ್ನನ್ನು ಲೋಕಸಭೆಯಲ್ಲಿ ಅಪ್ಪಿಕೊಂಡಿದ್ದು ಬಾಲಿಶತನವೇ ಅಲ್ಲವೇ ಎಂಬ ಬಗ್ಗೆ ನಿರ್ಧರಿಸುವುದು ನಿಮಗೆ ಬಿಟ್ಟಿದ್ದು. ಒಂದು ವೇಳೆ ಆ ಕುರಿತು ನಿಮಗೆ ಯಾವುದೇ ತೀರ್ಮಾನಕ್ಕೆ ಬರಲು ಆಗದಿದ್ದರೆ ಅವರು ಕಣ್ಣು ಹೊಡೆದ ದೃಶ್ಯವನ್ನು ನೋಡಿ. ಅಲ್ಲಿಗೆ ನಿಮಗೆ ಸ್ಪಷ್ಟ ಉತ್ತರ ಲಭಿಸುತ್ತದೆ ಎಂದು ಹೇಳಿದ್ದಾರೆ. 
ತದನಂತರ ಪಾಕಿಸ್ತಾನದ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ಇಮ್ರಾನ್ ಖಾನ್ ಅವರಿಗೆ ಅಭಿನಂದಿಸಿದ ಅವರು, ಪಕ್ಕದ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದುವ ಅಗತ್ಯವಿದೆ. ಪಾಕಿಸ್ತಾನವು ಸುರಕ್ಷಿತ, ಸ್ಥಿರ, ಭಯೋತ್ಪಾದನೆ/ಹಿಂಸಾಚಾರ ಮುಕ್ತ ದೇಶ ಹಾಗೂ ಸಮೃದ್ದಿಗಾಗಿ ಶ್ರಮಿಸಲಿದೆ ಎಂಬ ನಂಬಿಕೆ ಎಂದು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com