ಶ್ರೀನಗರ: ಇತ್ತೀಚೆಗಷ್ಟೇ ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಪೊಲೀಸ್ ಪೇದೆಯ ಪುತ್ರ ಕೂಡ ಈಗ ಸೇನೆ ಸೇರಲು ಸಜ್ಜಾಗಿ ನಿಂತಿದ್ದಾನೆ.
ತನ್ನ ತಂದೆಯ ಕೊಂದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾನು ಕೂಡ ಭಾರತೀಯ ಸೇನೆ ಸೇರುತ್ತೇನೆ ಎಂದು ಪೇದೆ ಪುತ್ರ ಹೇಳಿಕೆ ನೀಡಿದ್ದಾನೆ. ಕಳೆದ ಬಾಟಮಾಲೂ ಪ್ರದೇಶದಲ್ಲಿ ನಡೆದಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಪೇದೆ ಪರ್ವೇಜ್ ಅಹ್ಮದ್ ಹುತಾತ್ಮರಾಗಿದ್ದರು.
ನಿನ್ನೆ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆದಿದ್ದು, ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಪುತ್ರ ತಾನೂ ಕೂಡ ಸೇನೆ ಸೇರಿ ನನ್ನ ತಂದೆಯ ಕೊಂದ ಉಗ್ರರನ್ನು ಕೊಂದು ಹಾಕುತ್ತೇನೆ ಎಂದು ಹೇಳಿದ್ದಾನೆ.
ಇನ್ನು ಪರ್ವೇಜ್ ಅಹ್ಮದ್ ಸಾವಿನ ಹಿನ್ನಲೆಯಲ್ಲಿ ಅವರ ಕುಟುಂಬಸ್ಥರಿಗೆ ಕಾಶ್ಮೀರ ಸರ್ಕಾರ ಉದ್ಯೋಗ ಭರವಸ ನೀಡಿದೆಯಾದರೂ, ತಾನು ಸೇನೆಯನ್ನೇ ಸೇರುತ್ತೇನೆ ಎಂದು ಆತನ ಪುತ್ರ ಹೇಳಿಕೆ ನೀಡಿರುವು ವಿಶೇಷವಾಗಿದೆ.
ಶ್ರೀನಗರದ ಬಾಟಮಲೂ ಪ್ರದೇಶದಲ್ಲಿ ಭಾನುವಾರ ಉಗ್ರರು ಅವಿತಿರುವ ಕುರಿತು ಮಾಹಿತಿ ಪಡೆದ ಸೇನಾಧಿಕಾರಿಗಳು ಮತ್ತು ಪೊಲೀಸರು ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಪೇದೆ ಪರ್ವೇಜ್ ಅಹ್ಮದ್ ಅವರಿಗೆ ಗುಂಡೇಟು ತಗುಲಿ ಹುತಾತ್ಮರಾಗಿದ್ದರು.