ಲೋಕಪಾಲ್ ಆಯ್ಕೆ ಸಮಿತಿ ಸಭೆಯ ಆಹ್ವಾನ ತಿರಸ್ಕರಿಸಿದ ಖರ್ಗೆ

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ನಾಲ್ಕನೆ ಬಾರಿಯೂ ಲೋಕಪಾಲ್ ಆಯ್ಕೆ ಸಮಿತಿ...
ಮಲ್ಲಿಕಾರ್ಜುನ್ ಖರ್ಗೆ
ಮಲ್ಲಿಕಾರ್ಜುನ್ ಖರ್ಗೆ
ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ನಾಲ್ಕನೆ ಬಾರಿಯೂ ಲೋಕಪಾಲ್ ಆಯ್ಕೆ ಸಮಿತಿ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಖರ್ಗೆ, ಲೋಕಪಾಲ್ ಕಾಯಿದೆ 2013ರಲ್ಲಿ ರೂಪಿಸಿದಂತೆ ಏಕೈಕ ಅತಿದೊಡ್ಡ ಪ್ರತಿಪಕ್ಷಕ್ಕೆ ಅಧಿಕೃತ ಪ್ರತಿಪಕ್ಷದ ನಾಯಕನ ಸ್ಥಾನ ನೀಡುವವರೆಗೆ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಭೆಗೆ ಆಹ್ವಾನ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಖರ್ಗೆ, ಸಭೆಯಲ್ಲಿ ಭಾಗವಹಿಸುವ, ಅಭಿಪ್ರಾಯ ಮಂಡಿಸುವ ಅಥವಾ ಮತ ಹಾಕುವ ಹಕ್ಕು ನನಗೆ ಇಲ್ಲ ಎಂದಿದ್ದಾರೆ.
ಲೋಕಪಾಲ್ ಆಯ್ಕೆ ಸಮಿತಿಗೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುವಂತೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಖರ್ಗೆ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ ಪ್ರಕಾರ, ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಲೋಕಸಭಾ ಸ್ಪೀಕರ್, ಲೋಕಸಭೆಯ ವಿರೋಧ ಪಕ್ಷ ನಾಯಕ, ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನೇಮಕ ಮಾಡುವ ಸುಪ್ರೀಂ ಕೋರ್ಟ್‍ನ ಒಬ್ಬರು ನ್ಯಾಯಮೂರ್ತಿ ಮತ್ತು ರಾಷ್ಟ್ರಪತಿ ನೇಮಕ ಮಾಡುವ ಒಬ್ಬ ಕಾನೂನು ತಜ್ಞರು ಸದಸ್ಯರಾಗಿರುತ್ತಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಪಡೆಯಬೇಕಾದರೆ ಒಟ್ಟು ಸದಸ್ಯರ 10ನೇ ಒಂದು ಭಾಗದ ಸದಸ್ಯರು ಆಯ್ಕೆಯಾಗಬೇಕಾಗುತ್ತದೆ. 16ನೇ ಲೋಕಸಭೆಯಲ್ಲಿ ಯಾವೊಂದು ವಿರೋಧ ಪಕ್ಷವು 55 ಸ್ಥಾನಗಳನ್ನು ಗೆದ್ದುಕೊಂಡಿಲ್ಲ. ಕಾಂಗ್ರೆಸ್ 44 ಸ್ಥಾನ ಗೆದ್ದಿದ್ದರೂ ವಿರೋಧ ಪಕ್ಷಕ್ಕೆ ಬೇಕಾಗಿದ್ದ ಸಂಖ್ಯೆಯನ್ನು ತಲುಪದ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಸಿಗದೇ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ಸ್ಥಾನಮಾನ ಸಿಕ್ಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com