ಇಂಪಾಲ್: ಮಣಿಪುರ ಬಂಡುಕೋರರಿಗೆ ಪೊಲೀಸರ ಬಂದೂಕುಗಳನ್ನು ನೀಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಯಮ್ತಾಂಗ್ ಹಾಕಿಪ್ ಮತ್ತು ಕುಕಿ ರೆವಲೂಷನರಿ ಆರ್ಮಿ(ಕೆಆರ್ಎ) ಮುಖ್ಯಸ್ಥ ಡೇವಿಡ್ ಹಂಗ್ಸಿಂಗ್ ರನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಅಧಿಕಾರಿಗಳು ಬಂಧಿಸಿದ್ದಾರೆ.
2016 ಮತ್ತು 2017ರಲ್ಲಿ ಮಣಿಪುರ ರೈಫಲ್ಸ್ 2ನೇ ಬೆಟಾಲಿಯನ್ ನಲ್ಲಿ ಬಂದೂಕು ನಾಪತ್ತೆಯಾಗಿದ್ದು ಈ ಸಂಬಂಧ ಎನ್ಐಎ ಅಧಿಕಾರಿಗಳು ಕಾಂಗ್ರೆಸ್ ಶಾಸಕನನ್ನು ಬಂಧಿಸಿದ್ದಾರೆ. ಯಮ್ತಾಂಗ್ ಸೈಕುಲ್ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದಾರೆ.
ಯಮ್ತಾಂಗ್ ಪೊಲೀಸರ ಕೆಲ ಬಂದೂಕುಗಳನ್ನು ಡೇವಿಡ್ ಹಂಗ್ಸಿಂಗ್ ಗೆ ನೀಡಿದ್ದು ಈ ಸಂಬಂಧ ಇಬ್ಬರನ್ನು ಎನ್ಐಎ ಪೊಲೀಸರು ಬಂಧಿಸಿ ವಿಶೇಷ ಎನ್ಐಎ ಕೋರ್ಟ್ ಮುಂದೆ ಹಾಜರುಪಡಿಸಿದ್ದು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.
ಕಳೆದ ತಿಂಗಳು ಎನ್ಐಎ ಅಧಿಕಾರಿಗಳು ಹಾಕಿಪ್ ಅವರ ಮನೆಯಲ್ಲಿ ಶೋಧ ನಡೆಸಿದಾಗ ನಾಪತ್ತೆಯಾಗಿದ್ದ 56 ಬಂದೂಕುಗಳ ಪೈಕಿ ಒಂದನ್ನು ವಶಕ್ಕೆ ಪಡೆದಿದ್ದರು. ಇದೇ ವೇಳೆ ನಗದು ಮತ್ತು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು.