ವಿಚ್ಛೇದನ ತೀರ್ಪಿಗೂ ಮೊದಲೇ ಮರು ವಿವಾಹಕ್ಕೆ 'ಸುಪ್ರೀಂ' ಅಸ್ತು!

ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ, ಸಂಧಾನ ಕೇಂದ್ರದಲ್ಲಿ ದಂಪತಿ ನಡುವೆ ಒಮ್ಮತದ ಅಭಿಪ್ರಾಯ ಮೂಡಿದರೆ ಆಕೆ ಅಥವಾ ಆತ ಎರಡನೇ ವಿವಾಹವಾಗಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ, ಸಂಧಾನ ಕೇಂದ್ರದಲ್ಲಿ ದಂಪತಿ ನಡುವೆ ಒಮ್ಮತದ ಅಭಿಪ್ರಾಯ ಮೂಡಿದರೆ ಆಕೆ ಅಥವಾ ಆತ ಎರಡನೇ ವಿವಾಹವಾಗಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ಕೋರ್ಟ್ ಇಂತಹ ಅಭಿಪ್ರಾಯಪಟ್ಟಿದ್ದು, ಈ ಮೂಲಕ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ 2ನೇ ವಿವಾಹವಾಗಿ, 7 ವರ್ಷಗಳಿಂದ ಕಾನೂನು ಸುಳಿಗೆ ಸಿಲುಕಿದ್ದ ವ್ಯಕ್ತಿಗೆ ನಿರಾಳತೆ ನೀಡಿದೆ. 
ವಿಚ್ಛೇದನ ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ  ನಾಗೇಶ್ವರ ರಾವ್ ನೇತೃತ್ವದ ಪೀಠ, ಇಂಥಹ ವಿವಾಹಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶವಿದೆ ಎಂದು ಸ್ಪಷ್ಟನೆ ನೀಡಿದರು. ಅಲ್ಲದೆ ಇದಕ್ಕೆ ವಿರುದ್ಧವಾಗಿ ಕೌಟುಂಬಿಕ ಕೋರ್ಟ್ ಹಾಗೂ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿದರು. ಆ ಮೂಲಕ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಎರಡನೇ ವಿವಾಹವಾಗಿ, ಕಳೆದ ಏಳು ವರ್ಷಗಳಿಂದ ಕಾನೂನು ಸುಳಿಗೆ ಸಿಲುಕಿದ್ದ ವ್ಯಕ್ತಿಗೆ ಕೋರ್ಟ್ ನಿರಾಳತೆ ನೀಡಿದೆ. ಅಂತೆಯೇ ಆತನ ವಿರುದ್ಧ ಮೊದಲ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಏನಿದು ಪ್ರಕರಣ?: 
ಅನುರಾಗ್​ ಎಂಬ ವ್ಯಕ್ತಿಯೊಬ್ಬರಿಂದ ವಿಚ್ಛೇದನ ಕೋರಿ ಪತ್ನಿ ರಚನಾ ಎಂಬುವವರು 2009ರಲ್ಲಿ ದೆಹಲಿಯ ಕೌಟುಂಬಿಕ ಕೋರ್ಟ್ ಮೊರೆ ಹೋಗಿದ್ದರು. ರಚನಾ ಜೊತೆ ಬಾಳಲು ತಾವು ಸಿದ್ಧವಿರುವುದಾಗಿ ಅನುರಾಗ್ ಇನ್ನೊಂದು ಅರ್ಜಿ ಸಲ್ಲಿಸಿದ್ದರು. ರಚನಾರ ಅರ್ಜಿಯನ್ನು ಮಾನ್ಯ ಮಾಡಿದ್ದ ಕೋರ್ಟ್, ಅನುರಾಗ್ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಅನುರಾಗ್ ಹೈಕೋರ್ಟ್​ಗೆ ಹೋಗಿದ್ದರು. ಈ ಅರ್ಜಿ ಇತ್ಯರ್ಥ ಬಾಕಿ ಇರುವಾಗಲೇ ಸಂಧಾನ ಕೇಂದ್ರದಲ್ಲಿ (ಮೀಡಿಯೇಷನ್ ಸೆಂಟರ್) ವಿಚ್ಛೇದನದ ಕುರಿತು ದಂಪತಿ ಒಪ್ಪಂದಕ್ಕೆ ಬಂದರು. ರಚನಾ ಜತೆ ಬಾಳಲು ಸಿದ್ಧ ಎಂದು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆಯುವುದಾಗಿ ಅನುರಾಗ್ ಹೇಳಿದ್ದರು. ಅದನ್ನು ರಚನಾ ಒಪ್ಪಿಕೊಂಡಿದ್ದರು. ಕಾನೂನು ಪ್ರಕಾರ 30 ದಿನಗಳ ಒಳಗಾಗಿ ಈ ಕುರಿತು ಅನುರಾಗ್ ಹೈಕೋರ್ಟ್​ಗೆ ಲಿಖಿತ ಮಾಹಿತಿ ನೀಡಿದರು.
ಈ ಮಾಹಿತಿ ಪುರಸ್ಕರಿಸಿ 2011ರ ಡಿಸೆಂಬರ್ 20ರಂದು ಹೈಕೋರ್ಟ್ ಅಂತಿಮ ತೀರ್ಪು ನೀಡಿತು. ಆದರೆ ತೀರ್ಪು ಬರುವ ಒಂದು ವಾರ ಮೊದಲು (ಡಿಸೆಂಬರ್ 6ರಂದು) ಅನುರಾಗ್ ಎರಡನೆಯ ವಿವಾಹವಾಗಿದ್ದರು. ಇದನ್ನು ರಚನಾ ಕೌಟುಂಬಿಕ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಅಂತಿಮ ತೀರ್ಪು ಬರುವ ಮುನ್ನ ಮರುವಿವಾಹವಾಗಿದ್ದು ಸರಿಯಲ್ಲ ಎಂದಿದ್ದ ಕೋರ್ಟ್, ಎರಡನೆಯ ವಿವಾಹವನ್ನು ರದ್ದು ಮಾಡಿತ್ತು. ಹೈಕೋರ್ಟ್ ಕೂಡ ಈ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದಿತ್ತು. ಅಂತಿಮವಾಗಿ ಅನುರಾಗ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ಸ್ವೀಕರಿಸಿದ ಸುಪ್ರೀಂ ಕೋರ್ಟ್ ವಿಚಾರಣ ನಡೆಸಿ, ಕೌಟುಂಬಿಕ ಕೋರ್ಟ್​ಗಳು ನೀಡಿರುವ ಆದೇಶ ಪ್ರಶ್ನಿಸಿ ಪತಿ ಅಥವಾ ಪತ್ನಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ತೀರ್ಪು ಬಾಕಿಯಿದ್ದರೂ, ದಂಪತಿ ನಡುವೆ ಸಂಧಾನ ಕೇಂದ್ರದಲ್ಲಿ ಒಪ್ಪಂದ ಏರ್ಪಟ್ಟರೆ, ಈ ಕುರಿತು ಹೈಕೋರ್ಟ್ ಗೆ ಲಿಖಿತ ಮಾಹಿತಿ ನೀಡಿದರೆ ಸಾಕು. ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಕಾಯಬೇಕಿಲ್ಲ. ಮರುಮದುವೆಯಾಗುವ ಅಧಿಕಾರ ಪತಿ ಅಥವಾ ಪತ್ನಿಗೆ ಇದೆ ಎಂದು ಮಹತ್ವದ ತೀರ್ಪು ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com