ಚೆನ್ನೈ: ಸುದೀರ್ಘ 50 ವರ್ಷಗಳ ನಂತರ ಡಿಎಂಕೆ ಅಧ್ಯಕ್ಷ ಪಟ್ಟಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸದೆ ಇರುವುದರಿಂದ ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾಗಿದ್ದರು.
ಈ ಮೂಲಕ 50 ವರ್ಷಗಳ ಬಳಿಕ ಪಕ್ಷದ ಎಂ.ಕೆ ಸ್ಟಾಲಿನ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. 65 ವರ್ಷದ ಸ್ಟಾಲಿನ್ ಭಾನುವಾರ ನಾಮಪತ್ರ ಸಲ್ಲಿಸಿದ್ದರು.
2016 ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಡಿಎಂಕೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಟಾಲಿನ್ ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
1969 ಜುಲೈ 29ರಲ್ಲಿ ಕರುಣಾನಿಧಿ ಅವರು ಡಿಎಂಕೆ ಪಕ್ಷದ ಅಧ್ಯಕ್ಷ ಪಟ್ಟ ಅಲಂಕರಿಸಿ, ನಿಧನರಾಗುವವರೆಗೂ ಅದೇ ಸ್ಥಾನದಲ್ಲಿ ಇದ್ದರು. ಇದೀಗ ಆ ಸ್ಥಾನಕ್ಕೆ ಅವರ ಕಿರಿಯ ಪುತ್ರ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದರ ನಡುವೆ ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ. ಅಳಗಿರಿ ತಮ್ಮನ್ನು ಪಕ್ಷಕ್ಕೆಸೇರಿಸಿಕೊಳ್ಳದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.