ಕ್ರೈಸ್ತ ಮಿಷನರಿ ಜಾನ್ ಅಲೆನ್ ಚೌ ಹತ್ಯೆ ಹಿಂದೆ ಅಮೆರಿಕನ್ನರ ಕೈವಾಡ, ಪೊಲೀಸರಿಂದ ಸ್ಫೋಟಕ ಮಾಹಿತಿ

ಅಂಡಮಾನ್ ಮತ್ತು ನಿಕೋಬಾರ್ ನ ಬುಡುಕಟ್ಟು ನಿವಾಸಿಗಳಿಂದ ಹತ್ಯೆಗೀಡಾದ ಅಮೆರಿಕ ಪ್ರವಾಸಿಗ ಜಾನ್ ಅಲೆನ್ ಚೌ ಹತ್ಯೆ ಹಿಂದೆ ಇಬ್ಬರು ಅಮೆರಿಕನ್ನರ ಕೈವಾಡವಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ನ ಬುಡುಕಟ್ಟು ನಿವಾಸಿಗಳಿಂದ ಹತ್ಯೆಗೀಡಾದ ಅಮೆರಿಕ ಪ್ರವಾಸಿಗ ಜಾನ್ ಅಲೆನ್ ಚೌ ಹತ್ಯೆ ಹಿಂದೆ ಇಬ್ಬರು ಅಮೆರಿಕನ್ನರ ಕೈವಾಡವಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂಡಮಾನ್ ನ ನಿರ್ಭಂಧಿತ ಸೆಂಟಿನೆಲ್ ದ್ವೀಪಕ್ಕೆ ತೆರಳಿ ಅಲ್ಲಿನ ಬುಡಕಟ್ಟು ನಿವಾಸಿಗಳಿಂದ ಹತ್ಯೆ ಗೀಡಾದ ಜಾನ್ ಅಲೆನ್ ಚೌ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಂಡಮಾನ್ ಪೊಲೀಸರಿಗೆ ದಿನಕಳೆದಂತೆ ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದ್ದು, ಸೆಂಟಿನೆಲ್ ದ್ವೀಪಕ್ಕೆ ತೆರಳುವುದು ಕೇವಲ ಚೌ ನಿರ್ಧಾರವಲ್ಲ. ಬದಲಿಗೆ ಈ ನಿರ್ಧಾರದ ಹಿಂದೆ ಮತ್ತಿಬ್ಬರು ಅಮೆರಿಕನ್ ಪ್ರಜೆಗಳ ಕೈವಾಡವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಚೌ ಅಂಡಮಾನ್ ದ್ವೀಪಕ್ಕೆ ಮತಾಂತರಕ್ಕಾಗಿಯೇ ತೆರಳಿದ್ದ ಎಂದೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆತ ಖುದ್ಧು ತನ್ನ ಡೈರಿಯಲ್ಲಿ ಉಲ್ಲೇಖ ಮಾಡಿದ್ದು, ದ್ವೀಪ ನಿವಾಸಿಗಳಿಗೆ ಜೀಸಸ್ ಪ್ರೀತಿಯನ್ನು ಹಂಚಲು ಹೋಗುತ್ತಿದ್ದೇನೆ ಎಂದು ಆತ ಬರೆದುಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಜಾನ್ ಮತ್ತು ಆತನ ಇಬ್ಬರು ಸ್ನೇಹಿತರಾದ ಓರ್ವ ಮಹಿಳೆ ಮತ್ತು ಓರ್ವ ಪುರುಷ ಪೋರ್ಟ್ ಬ್ಲೇರ್ ನಲ್ಲಿ ಸಣ್ಣದೊಂದು ರೂಂ ಮಾಡಿಕೊಂಡಿದ್ದರಂತೆ. ನಿರ್ಭಂಧಿತ ಸೆಂಟಿನೆಲ್ ದ್ವೀಪಕ್ಕೆ ತೆರಳಲು ಈ ಡಾರ್ಕ್ ರೂಂ ನಲ್ಲಿಯೇ ಮೂವರೂ ತಂತ್ರ ರೂಪಿಸಿದ್ದರು. ಮತಾಂತರ ಸಂಬಂಧ ಜಾನ್ ತಲೆ ಕೆಡಿಸಿ ಆತ ದ್ವೀಪಕ್ಕೆ ತೆರಳುವಂತೆ ಹುರಿದುಂಬಿಸಿದ್ದು ಇವರೇ ಬಳಿಕ ಆತ ದ್ವೀಪಕ್ಕೆ ತೆರಳುವ 2 ದಿನ ಮುಂಚಿತವಾಗಿ ಅವರು ಕೋಲ್ಕತಾಗೆ ಪ್ರಯಾಣಿಸಿದ್ದರು. ಅಲ್ಲದೆ ಮೀನುಗಾರರಿಗೆ ಅಗತ್ಯ ಬಿದ್ದರೆ ಲಂಚ ನೀಡುವಂತೆಯೂ ಜಾನ್ ತಲೆ ಕೆಡಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಂದು ಆಗಿದ್ದೇನು?:
ಸ್ಥಳೀಯ ಮೀನುಗಾರರಿಗೆ ಹಣದ ಆಮಿಷವೊಡ್ಡಿ ಸೆಂಟಿನೆಲ್‌ ದ್ವೀಪದ ಸನಿಹಕ್ಕೆ ದೋಣಿ ಮೂಲಕ ಜಾನ್‌ ಹೋಗಿದ್ದ. ಅಲ್ಲಿಂದ ಕಿರು ದೋಣಿಯಲ್ಲಿ ಸೆಂಟಿನೆಲ್‌ ದ್ವೀಪ ತಲುಪಿದ್ದ. ಭಾರತೀಯ ವಾಯುಪಡೆ, ಕರಾವಳಿ ಕಾವಲು ಪಡೆ ಕಣ್ತಪ್ಪಿಸಲು ರಾತ್ರಿ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದ. ದ್ವೀಪದಲ್ಲಿ ತನಗಾದ ಅನುಭವವನ್ನು ಜಾನ್‌ ಹೀಗೆ ಬರೆದುಕೊಂಡಿದ್ದಾನೆ.
'ಆದಿವಾಸಿಗಳಿಗಾಗಿ ಮೀನು, ಫುಟ್ಬಾಲ್‌ನಂತಹ ಉಡುಗೊರೆ ಹೊತ್ತು ಸೆಂಟಿನೆಲ್‌ ದ್ವೀಪದಲ್ಲಿ ಇಳಿಯುತ್ತಿದ್ದಂತೆ ಆದಿವಾಸಿಗಳು ಎದುರಾದರು. ನನ್ನನ್ನು ಅವರು ಸ್ವಾಗತಿಸಲಿಲ್ಲ. ಅವರ ಕೆಲವೇ ಇಂಚು ಸಮೀಪಕ್ಕೆ ಹೋಗಿದ್ದೆ. ಅವರ ಮುಖ ದುಂಡಗಿದ್ದು, ಹಳದಿ ಬಣ್ಣ ಮೆತ್ತಿಕೊಂಡಿದ್ದರು. ವಯಸ್ಕರು 5ರಿಂದ 5.5 ಅಡಿ ಎತ್ತರವಿದ್ದರು. ಅವರಿಗೆ ಗಿಫ್ಟ್‌ ನೀಡಲು ಹೋದಾಗ ಅಂದಾಜು 10 ವರ್ಷ ಪ್ರಾಯದ ಒಬ್ಬ ಹುಡುಗ ಏಕಾಏಕಿ ಬಾಣ ಬಿಟ್ಟ. ಅದು ನನ್ನ ಎದೆಯತ್ತ ನುಗ್ಗಿಬಂತು. ಎದೆ ಮುಂಭಾಗ ಬೈಬಲ್‌ ಹಿಡಿದಿದ್ದೆ. ಬೈಬಲ್‌ಗೆ ಚುಚ್ಚಿಕೊಂಡಿತು. ಆ ಬಾಣ ತೀರಾ ಸಣ್ಣದಿತ್ತು. ಭಾರಿ ಹರಿತವಾಗಿತ್ತು. ಲೋಹದಿಂದ ತಯಾರಿಸಲಾಗಿತ್ತು.'
'ಇದೇ ವೇಳೆ ಇಬ್ಬರು ಶಸ್ತ್ರಸಜ್ಜಿತ ಆದಿವಾಸಿಗಳು ಓಡುತ್ತಾ ಬಂದರು. ಅವರ ಬಳಿಯೂ ಬಿಲ್ಲು-ಬಾಣಗಳಿದ್ದವು. ನನ್ನ ಹೆಸರು ಜಾನ್‌, ನಾನು ನಿಮ್ಮನ್ನು ಪ್ರೀತಿಸುತ್ತೇನೆ, ಯೇಸು ಕೂಡ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಕೂಗಿ ಹೇಳಿದೆ. ಅವರ ಬಳಿ ಇದ್ದ ಬಾಣಗಳನ್ನು ಕಂಡು ಗಾಬರಿಗೆ ಒಳಗಾದ ನಾನು ನನ್ನ ಬಳಿ ಇದ್ದ ಮೀನನ್ನು ಅವರತ್ತ ಎಸೆದೆ.  ಆದರೂ ಅವರು ನನ್ನತ್ತ ಮುನ್ನುಗ್ಗಿ ಬರುತ್ತಿದ್ದರು. ಭಯಭೀತನಾಗಿ ಕಾಲಿಗೆ ಬುದ್ಧಿ ಹೇಳಿದೆ. ಕಿರುದೋಣಿಯ ಸಮೀಪಕ್ಕೆ ಬಂದರೆ ಅದು ಹಾಳಾಗಿತ್ತು. ಬಹುಶಃ ಆದಿವಾಸಿಗಳ ಮತ್ತೊಂದು ಗುಂಪು ಅದನ್ನು ಹಾನಿ ಮಾಡಿರಬಹುದು. ಹೀಗಾಗಿ ಈಜಿಕೊಂಡು ಮೊದಲೇ ನಿಲ್ಲಿಸಲಾಗಿದ್ದ ಮೀನುಗಾರರ ದೋಣಿ ತಲುಪಿದೆ' ಎಂದು ಜಾನ್‌ ತನ್ನ ಡೈರಿಯಲ್ಲಿ ಬರೆದಿಟ್ಟಿದ್ದಾನೆ. 
ಆದಿವಾಸಿಗಳಿಂದ ಜೀವ ಉಳಿಸಿಕೊಂಡು ಬಂದರೂ ಆತ ಅಲ್ಲಿಂದ ಮರಳಲಿಲ್ಲ. ಮರುದಿನವೇ ಮತ್ತೆ ಸೆಂಟಿನೆಲ್‌ ದ್ವೀಪಕ್ಕೆ ಹೋದ. ಅಲ್ಲಿ ಆದಿವಾಸಿಗಳ ಬಾಣದ ದಾಳಿಗೆ ಬಲಿಯಾದ ಎಂದು ಹೇಳಲಾಗುತ್ತಿದೆ. ಆದರೆ ಜಾನ್‌ ಸಾವಿನ ಕುರಿತು ಬಗೆಬಗೆಯ ವಾದಗಳು ಕೇಳಿಬರುತ್ತಿವೆ. ಅಂಡಮಾನ್‌- ನಿಕೋಬಾರ್‌ ದ್ವೀಪದ ಡಿಜಿಪಿ ಅವರ ಪ್ರಕಾರ, ಫುಟ್‌ಬಾಲ್‌, ಬಲೆ, ಕತ್ತರಿ, ಔಷಧ ಕಿಟ್‌ನಂತಹ ಉಡುಗೊರೆಗಳನ್ನು ಹಿಡಿದು ಸೆಂಟಿನೆಲ್‌ ದ್ವೀಪಕ್ಕೆ ಜಾನ್‌ ಹೋಗುತ್ತಿದ್ದಂತೆ ಬಾಣಗಳಿಂದ ಆತನ ಮೇಲೆ ದಾಳಿ ನಡೆಯಿತು. ಜೀವ ಇದ್ದಾಗಲೇ ಆತನನ್ನು ಆದಿವಾಸಿಗಳು ಎಳೆದೊಯ್ದರು. ಇನ್ನೂ ಕೆಲವು ವರದಿಗಳ ಪ್ರಕಾರ, ಕೊಲ್ಲುವ ಮುನ್ನ ಜಾನ್‌ನನ್ನು ಎರಡು ದಿನ ಆದಿವಾಸಿಗಳು ಒತ್ತೆ ಇಟ್ಟುಕೊಂಡಿದ್ದರು ಎಂದು ಹೇಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com