

ನವದೆಹಲಿ: ಮದ್ಯ ಉದ್ಯಮಿ ವಿಜಯ್ ಮಲ್ಯ ಹಸ್ತಾಂತರ ಪ್ರಕರಣದ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಿಬಿಐ ಜಂಟಿ ನಿರ್ದೇಶಕ ಎಸ್ . ಸಾಯಿ ಮನೋಹರ್ ಅವರ ನೇತೃತ್ವದಲ್ಲಿನ ಅಧಿಕಾರಿಗಳ ತಂಡ ಲಂಡನ್ ಗೆ ತೆರಳಿದೆ.
ಈವರೆಗಿನ ವಿಚಾರಣೆಗಳಲ್ಲಿ ವಿಶೇಷ ಸಿಬಿಐ ನಿರ್ದೇಶಕ ರಾಕೇಶ್ ಅಸ್ತಾನಾ ಪಾಲ್ಗೊಂಡಿದ್ದರು. ಆದರೆ , ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ನಡುವಿನ ಒಳ ಜಗಳದ ಹಿನ್ನೆಲೆಯಲ್ಲಿ ಸರ್ಕಾರ ಅಸ್ತಾನ ಅವರನ್ನು ಬಲವಂತವಾಗಿ ರಜೆ ಮೇಲೆ ಕಳುಹಿಸಿದ್ದು, ಈಗ ಮನೋಹರ್ ಅವರು ಮಲ್ಯ ಹಸ್ತಾಂತರ ಪ್ರಕರಣ ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಸಿಬಿಐ ಅಧಿಕಾರಿಗಳೊಂದಿಗೆ ಇಬ್ಬರು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಹ ಲಂಡನ್ ಗೆ ತೆರಳಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ವಿಜಯ್ ಮಲ್ಯ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿ ವಂಚಿಸಿ 2016 ಮಾರ್ಚ್ ತಿಂಗಳಿಂದ ಲಂಡನ್ ನಲ್ಲಿದ್ದಾರೆ.ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ತನಿಖಾ ಸಂಸ್ಥೆಗಳು ಲಂಡನ್ ಸರ್ಕಾರದಲ್ಲಿ ಮನವಿ ಮಾಡಿಕೊಂಡಿವೆ. ಈ ಸಂಬಂಧ ವಿಚಾರಣೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸೋಮವಾರ ನಡೆಯಲಿದೆ.
Advertisement