ಉರ್ಜಿತ್ ಪಟೇಲ್ ರಾಜೀನಾಮೆ ಬಗ್ಗೆ ಪ್ರಧಾನಿ, ಜೇಟ್ಲಿ, ರಘುರಾಮ್ ರಾಜನ್, ಸ್ವಾಮಿ ಹೇಳಿದ್ದು ಹೀಗೆ

ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಅವರ ದಿಢೀರ್ ರಾಜೀನಾಮೆ ಆರ್ಥಿಕ ವಲಯದಲ್ಲಿ ಸಂಚಲನ ಮೂಡಿಸಿದ್ದು....
ಮೋದಿ-ಉರ್ಜಿತ್ ಪಟೇಲ್
ಮೋದಿ-ಉರ್ಜಿತ್ ಪಟೇಲ್
ನವದೆಹಲಿ: ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಅವರ ದಿಢೀರ್ ರಾಜೀನಾಮೆ ಆರ್ಥಿಕ ವಲಯದಲ್ಲಿ ಸಂಚಲನ ಮೂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ, ಮಾಜಿ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. 
ಮಾಜಿ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್: ತಮ್ಮ ಮಾಜಿ ಸಹೋದ್ಯೋಗಿ ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ರಾಜಿನಾಮೆ ಬಗ್ಗೆ ಆರ್ ಬಿಐ ನ ಮಾಜಿ ಗೌರ್ನರ್ ರಘುರಾಮ್ ರಾಜನ್ ಸಹ ಪ್ರತಿಕ್ರಿಯೆ ನೀಡಿದ್ದು, ಉರ್ಜಿತ್  ಪಟೇಲ್ ರಾಜೀನಾಮೆಯನ್ನು ಭಾರತೀಯರಿಗೆ ಆತಂಕದ ವಿಷಯ ಎಂದು ಹೇಳಿದ್ದಾರೆ. 

"ಉರ್ಜಿತ್ ಪಟೇಲ್ ರಾಜೀನಾಮೆ ಬೆಳವಣಿಗೆ ಭಾರತೀಯರಿಗೆ ಆತಂಕ ಉಂಟುಮಾಡುವ ವಿಷಯ, ಏಕೆಂದರೆ ಆರ್ಥಿಕ ವಿಷಯಗಳ ಬೆಳವಣಿಗೆ ಹಾಗೂ ಸ್ಥಿರತೆಗಾಗಿ ಸಂಸ್ಥೆಗಳು ಬಲಿಷ್ಠವಾಗಿರಬೇಕಾಗುತ್ತದೆ. ಉರ್ಜಿತ್ ಪಟೇಲ್ ಅವರ ಹೇಳಿಕೆಯನ್ನು ಗೌರವಿಸಬೇಕು ಹಾಗೂ ಅವರು ರಾಜೀನಾಮೆ ನೀಡಲು ಒತ್ತಡವಾಗಿ ಪರಿಣಮಿಸಿದ ಬಿಕ್ಕಟ್ಟಿನ ಬಗ್ಗೆ ನಾವು ವಿವರವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.  
ಸುಬ್ರಹ್ಮಣಿಯನ್ ಸ್ವಾಮಿ: ಉರ್ಜಿತ್ ಪಟೇಲ್ ಅವರ ರಾಜೀನಾಮೆಯನ್ನು ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ ಎಂದು ಸ್ವತಃ ಆರ್ಥಿಕ ತಜ್ಞರೂ ಆಗಿರುವ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ. "ಉರ್ಜಿತ್ ಪಟೇಲ್ ರಾಜೀನಾಮೆ ದೇಶದ ಆರ್ಥಿಕತೆ, ಆರ್ ಬಿಐ, ಸರ್ಕಾರಗಳಿಗೆ ಒಳ್ಳೆಯದಲ್ಲ. ಮುಂದಿನ ಆರ್ ಬಿಐ ಗೌರ್ನರ್ ಬರುವವರೆಗೆ ಜುಲೈ ತಿಂಗಳ ವರೆಗೆ ಉರ್ಜಿತ್ ಪಟೇಲ್ ಅವರು ಗೌರ್ನರ್ ಸ್ಥಾನದಲ್ಲಿ ಮುಂದುವರೆಯಬೇಕು,  ಪ್ರಧಾನಿ ನರೇಂದ್ರ ಮೋದಿ, ದೇಶದ ಹಿತಾಸಕ್ತಿಯಿಂದ ಉರ್ಜಿತ್ ಪಟೇಲ್ ಅವರೊಂದಿಗೆ ಮಾತುಕತೆ ನಡೆಸಿ ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸಬೇಕು ಎಂದು ಸ್ವಾಮಿ ಹೇಳಿದ್ದಾರೆ. 
ಅರುಣ್ ಜೇಟ್ಲಿ: ಇದೇ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಸಹ ಪ್ರತಿಕ್ರಿಯೆ ನೀಡಿದ್ದು, ಉರ್ಜಿತ್ ಪಟೇಲ್, ಗೌರ್ನರ್ ಹಾಗೂ ಡೆಪ್ಯುಟಿ ಗೌರ್ನರ್ ಆಗಿ ಸಲ್ಲಿಸಿರುವ ಸೇವೆ ಶ್ಲಾಘನಾರ್ಹವಾಗಿದ್ದು ಸರ್ಕಾರ ಅವರ ರಾಜೀನಾಮೆಯನ್ನು ಅಂಗೀಕರಿಸುತ್ತದೆ ಎಂದು ಹೇಳಿದ್ದಾರೆ. 
ಪ್ರಧಾನಿ ಮೋದಿ: ಇನ್ನು ಉರ್ಜಿತ್ ಪಟೇಲ್ ರಾಜೀನಾಮೆ ಬಗ್ಗೆ ಪ್ರಧಾನಿಯೂ ಟ್ವೀಟ್ ಮಾಡಿದ್ದು, ಉರ್ಜಿತ್ ಪಟೆಲ್ ಆರ್ಥಿಕ ವಿಷಯಗಳ ಬಗ್ಗೆ ಆಳವಾದ ಮತ್ತು ಒಳನೋಟವನ್ನು ಹೊಂದಿರುವ ಸಮರ್ಥ ಅರ್ಥಶಾಸ್ತ್ರಜ್ಞರಾಗಿದ್ದು, ಬ್ಯಾಂಕಿಂಗ್  ವ್ಯವಸ್ಥೆಯನ್ನು ಮೇಲೆತ್ತಿದ್ದರು, ಉರ್ಜಿತ್ ಪಟೇಲ್ ನೇತೃತ್ವದಲ್ಲಿ ಆರ್ ಬಿಐ ಆರ್ಥಿಕ ಸ್ಥಿರತೆ ಕಾಯ್ದುಕೊಂಡಿತ್ತು. ಉರ್ಜಿತ್ ಪಟೇಲ್ ಶ್ರೇಷ್ಠ ಹಾದಿಯನ್ನು ಹಾಕಿಕೊಟ್ಟಿದ್ದಾರೆ. ಆರ್ ಬಿಐ ನಲ್ಲಿ ಉರ್ಜಿತ್ ಪಟೇಲ್ ಅವರ ಅನುಪಸ್ಥಿತಿ ಅಗಾಧವಾಗಿ ಕಾಡಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com