ಪಂಚ ರಾಜ್ಯಗಳ ಸೋಲಿನ ನಂತರ ದೇಶದ ರೈತರಿಗೆ ಭರ್ಜರಿ ಗಿಫ್ಟ್ ನೀಡಲು ಮೋದಿ ಚಿಂತನೆ

ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಘಾತಕಾರಿ ಸೋಲು ಅನುಭವಿಸಿದ ಕೇಂದ್ರ ಸರ್ಕಾರ, ಮುಂಬರುವ....
ನರೇಂದ್ರ ಮೋದಿ
ನರೇಂದ್ರ ಮೋದಿ
ಬೆಂಗಳೂರು: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಘಾತಕಾರಿ ಸೋಲು ಅನುಭವಿಸಿದ ಕೇಂದ್ರ ಸರ್ಕಾರ, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ರೈತರಿಗೆ ಭರ್ಜರಿ ಗಿಫ್ಟ್​ ನೀಡುವ ಚಿಂತನೆ ನಡೆಸಿದೆ ಎನ್ನಲಾಗಿದೆ.
ಮಾಧ್ಯಮಗಳ ವರದಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು 2019ರ ಲೋಕಸಮರ ಗೆಲ್ಲಲು ದೇಶದ ರೈತರ ಸಾಲ ಮನ್ನಾ ಮಾಡುವ ಚಿಂತನೆಯಲ್ಲಿದ್ದಾರೆ. 
ರೈತರ ಸಾಲ ಮನ್ನಾ ಮಾಡುವುದರಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ವಾದ ಮಂಡಿಸುತ್ತಾ ಬಂದಿದ್ದ ಕೇಂದ್ರಕ್ಕೆ ಈಗ ವಾಸ್ತವ ಸ್ಥಿತಿಯ ಅರಿವಾಗಿದೆ. ರೈತರೇ ಬಹುಭಾಗವಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಡದಲ್ಲಿ ಬಿಜೆಪಿಗೆ ಆಗಿರುವ ಆಘಾತಕ್ಕೆ ರೈತರ ಮುನಿಸೇ ಕಾರಣ ಎಂಬ ಸತ್ಯ ಕೇಂದ್ರಕ್ಕೆ ಮನವರಿಕೆಯಾಗಿದೆ. ಹೀಗಾಗಿ, ರೈತರ ಸಾಲ ಮನ್ನಾ ಮಾಡಿ ರೈತರ ಮನ ಒಲಿಸಿಕೊಳ್ಳಲು ನರೇಂದ್ರ ಮೋದಿ ಬಯಸಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ದೇಶದ 26 ಕೋಟಿ 30ಲಕ್ಷ ರೈತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸುಮಾರು 4 ಲಕ್ಷ ಕೋಟಿ ರುಪಾಯಿ ಸಾಲವನ್ನು ಮನ್ನಾ ಮಾಡುವ ಚಿಂತನೆ ನಡೆಸಿದೆ.
ಸಾಲಮನ್ನಾ ಮಾಡುವ ಸಂಬಂಧ ಶೀಘ್ರವೇ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದ್ದು, ಅನ್ನದಾತರನ್ನು ಸೆಳೆಯಲು ಮೋದಿ ಸರ್ಕಾರ ಮುಂದಾಗಿದೆ.
2008ರಲ್ಲಿ ಯುಪಿಎ 72 ಸಾವಿರ ಕೋಟಿ ರು. ರೈತರ ಸಾಲಮನ್ನಾ ಮಾಡಿತ್ತು. ಅದರ ಪರಿಣಾಮವಾಗಿ 2009ರ ಲೋಕಸಭೆ ಚುನಾವಣೆಯಲ್ಲೂ ಯುಪಿಎ ಮತ್ತೆ ಅಧಿಕಾರಕ್ಕೇರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇನ್ನು ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಕೇಂದ್ರದ ಚಿಂತನೆ ನನಗೆ ಅಚ್ಚರಿ ತಂದಿಲ್ಲ. ಮೂರು ತಿಂಗಳ ಹಿಂದೆಯೇ ಸಾಲಮನ್ನಾ ಚಿಂತನೆ ಬಗ್ಗೆ ನನಗೆ ಗೊತ್ತಿತ್ತು. ಕೇಂದ್ರದಲ್ಲೂ ನನಗೆ ಸ್ನೇಹಿತರಿದ್ದಾರೆ, ಅವರು ನನಗೆ ತಿಳಿಸಿದ್ದಾರೆ. ರೈತರ ಸಾಲಮನ್ನಾ ಮಾಡದಿದ್ದರೆ, ಚುನಾವಣೆ ಕಷ್ಟ ಎಂಬುದು ಕೇಂದ್ರ ಸರ್ಕಾರಕ್ಕೆ ಗೊತ್ತಿದೆ. ಹೀಗಾಗಿ ಮೋದಿ ಸಾಲಮನ್ನಾ ನಿರ್ಧಾರ ಕೈಗೊಂಡರೂ ಅಚ್ಚರಿಯಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com