ಪಂಚ ರಾಜ್ಯ ಚುನಾವಣಾ ಫಲಿತಾಂಶ ಮೋದಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಅಣ್ಣಾ ಹಜಾರೆ

ಇನ್ನಾದರೂ ಮೋದಿ ಸರ್ಕಾರ ದೇಶದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು ಎಂದು ಖ್ಯಾತ ಸಾಮಾಜಿಕ ಹೋರಾಟಗಾರ ಮತ್ತು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಂಚ ರಾಜ್ಯ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಇನ್ನಾದರೂ ಮೋದಿ ಸರ್ಕಾರ ದೇಶದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು ಎಂದು ಖ್ಯಾತ ಸಾಮಾಜಿಕ ಹೋರಾಟಗಾರ ಮತ್ತು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.
ಇತ್ತೀಚೆಗೆ ಪ್ರಕಟವಾದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಪಕ್ಷ ತನ್ನ ಹಿಡಿತದಲ್ಲಿದ್ದ ಮೂರು ರಾಜ್ಯಗಳನ್ನು ಕಳೆದುಕೊಂಡಿದ್ದು, ಮಿಜೋರಾಂ ಮತ್ತು ತೆಲಂಗಾಣದಲ್ಲಿ ಸ್ಥಳೀಯ ಪಕ್ಷಗಳಾದ ಎಂಎನ್ಎಫ್ ಮತ್ತು ಟಿಆರ್ ಎಸ್ ಅಧಿಕಾರದ ಗದ್ದುಗೆ ಏರಿವೆ. ಆ ಮೂಲಕ ಬಿಜೆಪಿಯನ್ನು ಜನ ತಿರಸ್ಕರಿಸಿದ್ದು, ಇದರ ಬೆನ್ನಲ್ಲೇ ಸಾಮಾಜಿ ಹೋರಾಟಗಾರ ಅಣ್ಣಾ ಹಜಾರೆ ಕೂಡ ಚುನಾವಣಾ ಫಲಿತಾಂಶದ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.
'ಮೋದಿ ಸರ್ಕಾರ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕೆ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಮೋದಿ ಸರ್ಕಾರ ನೀಡಿದ್ದ ಆಶ್ವಾಸನೆಗಳನ್ನು ಪ್ರಧಾನಿ ಮೋದಿಯೂ ಸೇರಿದಂತೆ ಆ ಪಕ್ಷದ ನಾಯಕರು ಮರೆತಿದ್ದಾರೆ. ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರುವ ವಿಚಾರ, ರೈತರ ಬೆಳೆಗೆ ಬೆಂಬಲ ಬೆಲೆ, ಕೃಷಿ ಉತ್ಪಾದನೆಗಳಿಗೆ ಪ್ರೋತ್ಸಾಹ, ಅಧಿಕಾರದಲ್ಲಿ ಜನರ ಪಾಲ್ಗೊಳ್ಳುವಿಕೆ ಸೇರಿದಂತೆ ಬಿಜೆಪಿ ನೀಡಿದ್ದ ಯಾವುದೇ ಆಶ್ವಾಸನೆ ಈಡೇರಿಲ್ಲ. ಕೊಟ್ಟ ಮಾತನ್ನು ಅವರು ಮರೆತಿರಬಹುದು. ಆವರ ಮೇಲೆ ಭರವಸೆ ಇಟ್ಟು ಮತ ಹಾಕಿದ ಜನ ಎಂದಿಗೂ ಮರೆಯೊಲ್ಲ. ಇಂದಿನ ಚುನಾವಣಾ ಫಲಿತಾಂಶ ಮೋದಿ ಸರ್ಕಾರಕ್ಕೆ ಎಚ್ಚರಿಕೆ ಕರೆಗಂಟೆಯಾಗಿದ್ದು, 2019 ಲೋಕಸಭಾ ಚುನಾವಣೆಯ ವೇಳೆಗೆ ಸರ್ಕಾರ ತಾನು ನೀಡಿದ್ದ ಆಶ್ಸಾಸನೆಗಳನ್ನು ಈಡೇರಿಸದಿದ್ದರೆ ಇದೇ ರೀತಿಯ ಫಲಿತಾಂಶ ಪುನರಾವರ್ತನೆಯಾಗಬಹುದು ಎಂದು ಹೇಳಿದ್ದಾರೆ.
ಅಂತೆಯೇ ನೋಟು ನಿಷೇಧ ವಿಚಾರದ ಕುರಿತು ಮಾತನಾಡಿದ ಅಣ್ಣಾ ಹಜಾರೆ, ನೋಟು ನಿಷೇಧ ಮೋದಿ ಸರ್ಕಾರದ ತಪ್ಪು ನಡೆಯಾಗಿದ್ದು, ಯಾವ ಉದ್ದೇಶದಿಂದ ಅದನ್ನು ಜಾರಿಗೆ ತಂದರೋ ಅದು ಈಡೇರಿಲ್ಲ. ಕಪ್ಪುಹಣ ಬಯಲಿಗೆಳೆಯುವ ಅವರ ಉದ್ದೇಶ ಎಷ್ಟರ ಮಟ್ಟಿಗೆ ಯಶಸ್ವಿಯಾಯಿತು. ಶೇ.99ರಷ್ಟು ನಿಷೇಧಿತ ನೋಟುಗಳು ಬ್ಯಾಕಿಂಗ್ ವ್ಯವಸ್ಥೆಗೆ ಬಂದಿದೆ ಎಂದು ಆರ್ ಬಿಐ ಹೇಳಿದೆ. ಹಾಗಾದರೆ ಕಪ್ಪುಹಣ ಎಲ್ಲಿಗೆ ಹೋಯಿತು. ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ನುರಿತರೊಂದಿಗೆ ಕೂಲಂಕುಷ ಚರ್ಚೆ ನಡೆಸಬೇಕಾಗುತ್ತದೆ.
ರಾಮಮಂದಿರ ವಿಚಾರವನ್ನು ವೈಭವೀ ಕರಿಸುವ ಅಗತ್ಯವಿಲ್ಲ. ರಾಮಮಂದಿರಕ್ಕಿಂತಲೂ ಗಂಭೀರ ಸಮಸ್ಯೆಗಳು ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಶ್ರೀರಾಮ ಮಂದಿರದಲ್ಲಿಲ್ಲ, ಬಡವರ ಮನಸ್ಸಿನಲ್ಲಿದ್ದಾನೆ, ಬಡವರ ಉದ್ಧಾರ ಮಾಡಿದರೆ ಮಾತ್ರ ರಾಮನಿಗೆ ತೃಪ್ತಿ ಸಿಗುತ್ತದೆ. ನಾವು ಮಾಡುವ ಒಳ್ಳೆಯ ಕೆಲಸದಲ್ಲೇ ನಾವು ಶ್ರೀರಾಮನನ್ನು ಕಾಣಬೇಕು. ಇದನ್ನೇ ರಾಮ ಕೂಡ ಹೇಳಿದ್ದು ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com