ಕಂಪ್ಯೂಟರ್ ಮೇಲೆ ನಿಗಾ ಇಡಲು 10 ಏಜೆನ್ಸಿಗಳಿಗೆ ಅಧಿಕಾರ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

ಯಾವುದೇ ಕಂಪ್ಯೂಟರ್ ನಲ್ಲಿ ರಚಿತವಾದ, ರವಾನಿಸಲ್ಪಟ್ಟಿರುವ, ಸ್ವೀಕರಿಸಿದ ಅಥವಾ ಸಂಗ್ರಹಿಸಿದ ಮಾಹಿತಿಯ ಮೇಲೆ ನಿಗಾ ವಹಿಸಲು ಕೇಂದ್ರ ಸರ್ಕಾರ 10 ಕೇಂದ್ರೀಯ ಸಂಸ್ಥೆಗಳಿಗೆ ಅಧಿಕಾರ ನೀಡುವುದರ ವಿರುದ್ಧ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಯಾವುದೇ ಕಂಪ್ಯೂಟರ್ ನಲ್ಲಿ ರಚಿತವಾದ, ರವಾನಿಸಲ್ಪಟ್ಟಿರುವ, ಸ್ವೀಕರಿಸಿದ ಅಥವಾ ಸಂಗ್ರಹಿಸಿದ ಮಾಹಿತಿಯ ಮೇಲೆ ನಿಗಾ ವಹಿಸಲು ಕೇಂದ್ರ ಸರ್ಕಾರ  10 ಕೇಂದ್ರೀಯ ಸಂಸ್ಥೆಗಳಿಗೆ ಅಧಿಕಾರ ನೀಡುವುದರ ವಿರುದ್ಧ  ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರದ ಆದೇಶ  ಸಂವಿಧಾನಬಾಹಿರ, ಅಪ್ರಜಾಸತಾತ್ಮಕವಾಗಿದ್ದು, ಮೂಲಭೂತ ಹಕ್ಕುಗಳ ಮೇಲಿನ ದಾಳಿ ಎಂದು ಬಣ್ಣಿಸಿವೆ.

ತೃಣಮೂಲ ಕಾಂಗ್ರೆಸ್, ಆರ್ ಜೆಡಿ, ಸಮಾಜವಾದಿ ಪಕ್ಷ, ಸಿಪಿಐ (ಎಂ) ಪಕ್ಷಗಳು  ಕೇಂದ್ರಸರ್ಕಾರದ ಆದೇಶದ ವಿರುದ್ಧ ಸಾಮೂಹಿಕವಾಗಿ ವಿರೋಧಿಸಿದ್ದು, ಬಿಜೆಪಿ ಸರ್ಕಾರ ದೇಶವನ್ನು ಕಾಣ್ಗಾವಲಿನ ರಾಜ್ಯವನ್ನಾಗಿ ಪರಿವರ್ತಿಸುತ್ತಿದೆ ಎಂದು ಆರೋಪಿಸಿವೆ.

ಕೇಂದ್ರಸರ್ಕಾರದ ಆದೇಶ ಖಂಡನಾರ್ಹವಾದದ್ದು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.ಆದೇಶದ ಮೂಲಕ ದೇಶವನ್ನು ಕಣ್ಗಾವಲಿನ ರಾಜ್ಯವನ್ನಾಗಿ ಪರಿವರ್ತಿಸಲಾಗುತ್ತಿದೆ. ಕಂಪ್ಯೂಟರ್ ನಲ್ಲಿನ  ಎಲ್ಲಾ ಮಾಹಿತಿ  ನಿರ್ವಹಣೆ ಅಧಿಕಾರವನ್ನು  ಕೇಂದ್ರ ಏಜಿನ್ಸಿಗಳಿಗೆ ನೀಡುವುದನ್ನು ಸ್ವಿಕರಿಸಲು ಸಾಧ್ಯವಿಲ್ಲ ಎಂದು  ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಹೇಳಿದ್ದಾರೆ.

ಕೇಂದ್ರಸರ್ಕಾರ ಗೌಪ್ಯತೆ ಕಾನೂನುಗಳನ್ನು ಉಲ್ಲಂಘಿಸುತ್ತಿದೆ. ಚುನಾವಣೆಯಲ್ಲಿ ಸೋತ ಮೋದಿ ಸರ್ಕಾರ ಈಗ ಕಂಪ್ಯೂಟರ್ ನಲ್ಲಿ ಇರುವ ಮಾಹಿತಿಯನ್ನು  ಸಂಗ್ರಹಿಸುತ್ತಿದ್ದಾರೆ ಎಂದು ಕಾಂಗ್ರೆಸ್  ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜಿವಾಲಾ ಆರೋಪಿಸಿದ್ದಾರೆ.

ಕೇಂದ್ರಸರ್ಕಾರದ ಆದೇಶ ಸಂವಿಧಾನಬಾಹಿರ ಎಂದು ಸಮಾಜವಾದಿ ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದಾರೆ.  ತೃಣಮೂಲ ಕಾಂಗ್ರೆಸ್  ಅಧಿನಾಯಕಿ ಮಮತಾ ಬ್ಯಾನರ್ಜಿ ಕೂಡಾ ಕೇಂದ್ರಸರ್ಕಾರದ ಆದೇಶದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ  ಸಾರ್ವಜನಿಕರು ಧ್ವನಿ ಎತ್ತಬೇಕು ಎಂದು ಅವರು ಟ್ಲೀಟ್ ಮಾಡಿದ್ದಾರೆ.

ಆರ್ ಜೆಡಿ ಪಕ್ಷದ ಮುಖಂಡ ಮನೋಜ್ ಝಾ, ಕಣ್ಗಾವಲಿನ ರಾಜ್ಯದಲ್ಲಿನ ವಾಸಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ದೇಶದ ಎಲ್ಲಾ ಜನರನ್ನು ಏಕೆ ಅಪರಾಧಿ ರೀತಿಯಲ್ಲಿ ನೋಡಲಾಗುತ್ತಿದೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ಸಿತಾರಾಂ ಯೆಚೂರಿ ಪ್ರಶ್ನಿಸಿದ್ದಾರೆ.
ವೈಯಕ್ತಿಕ  ಹಕ್ಕುಗಳ ಮೇಲೆ ದಾಳಿ ಮಾಡುವ  ಕೇಂದ್ರಸರ್ಕಾರದ ಆದೇಶ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದದ್ದು ಹಾಗೂ ಅಸಂವಿಧಾನಿಕವಾದದ್ದು ಎಂದು ಎಎಪಿ ಮುಖಂಡ ಸಂಜಯ್ ಸಿಂಗ್  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com