ಸೊಹ್ರಾಬುದ್ದಿನ್ ಶೇಕ್ ಎನ್ಕೌಂಟರ್: ಎಲ್ಲಾ 22 ಆರೋಪಿಗಳ ಖುಲಾಸೆ, ಮುಂಬೈ ವಿಶೇಷ ಸಿಬಿಐ ಕೋರ್ಟ್ ತೀರ್ಪು

ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಸೊಹ್ರಾಬುದ್ದೀನ್ ಶೇಕ್ ಮತ್ತು ತುಳಸಿರಾಮ್ ಪ್ರಜಾಪತಿ ಎನ್'ಕೌಂಟರ್ ಪ್ರಕರಣಕ್ಕೆ...
ಸೊಹ್ರಾಬುದ್ದೀನ್ ಶೇಕ್ ಮತ್ತು ತುಳಸಿರಾಮ್ ಪ್ರಜಾಪತಿ (ಸಂಗ್ರಹ ಚಿತ್ರ)
ಸೊಹ್ರಾಬುದ್ದೀನ್ ಶೇಕ್ ಮತ್ತು ತುಳಸಿರಾಮ್ ಪ್ರಜಾಪತಿ (ಸಂಗ್ರಹ ಚಿತ್ರ)
ಮುಂಬೈ: ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಸೊಹ್ರಾಬುದ್ದೀನ್ ಶೇಕ್ ಮತ್ತು ತುಳಸಿರಾಮ್ ಪ್ರಜಾಪತಿ ಎನ್'ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಲಯ, ಎಲ್ಲಾ 22 ಆರೋಪಿಗಳನ್ನು ಖುಲಾಸೆಗೊಳಿಸಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯಿರುವ ಕಾರಣ ಎಲ್ಲಾ 22 ಆರೋಪಿಗಳನ್ನು ಖುಲಾಸೆಗೊಳಿಸಿರುವುದಾಗಿ ಸಿಬಿಐ ವಿಶೇಷ ನ್ಯಾಯಾಲಯ ತಿಳಿಸಿದೆ. 
ಸೊಹ್ರಾಬುದ್ದೀನ್ ಮತ್ತು ತುಳಸಿ ರಾಮ್ ಪ್ರಜಾಪತಿ ಅವರನ್ನು ಪಿತೂರಿ ನಡೆಸಿ ಹತ್ಯೆ ಮಾಡಲಾಗಿದೆ ಎಂಬ ಆರೋಪಕ್ಕೆ ಸರಿಯಾಗಿ ಪ್ರಬಲ ಸಾಕ್ಷ್ಯಾಧಾರಗಳಿಲ್ಲ ಎಂದಿರುವ ನ್ಯಾಯಾಲಯ ಆರೋಪಿಗಳನ್ನು ಖುಲಾಸೆ ಮಾಡುತ್ತಿರುವುದಾಗಿ ತಿಳಿಸಿದೆ.
ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳ ಜಂಟಿ ಪೊಲೀಸ್ ತಂಡ ಸೊಹ್ರಾಬುದ್ದಿನ್ ಅವರನ್ನು 2005ರಲ್ಲಿ ಮತ್ತು ಆತನ ಸಹಚರ ತುಳಸಿರಾಮ್ ಪ್ರಜಾಪತಿಯವರನ್ನು 2006ರಲ್ಲಿ ಎನ್'ಕೌಂಟರ್ ನಡೆಸಿ ಹತ್ಯೆ ಮಾಡಿತ್ತು. ಈ ಎರಡೂ ಎನ್'ಕೌಂಟರ್ ಗಳೂ ನಕಲಿ ಎಂದು ಆರೋಪ ಮಾಡಲಾಗಿತ್ತು. 
ಸೊಹ್ರಾಬುದ್ದೀನ್ ಎಲ್ಇಟಿ ಮತ್ತು ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕವಿತ್ತು ಎಂಬ ಕಾರಣ ನೀಡಿದ್ದ ಅಧಿಕಾರಿಗಳು ಎನ್'ಕೌಂಟರ್ ನಡೆಸಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕೈವಾಡವಿದೆ ಎಂದೂ ಕೂಡ ಆರೋಪ ಮಾಡಲಾಗಿತ್ತು. 
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಒಟ್ಟು 210 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದ್ದು, ಅಂತಿಮವಾಗಿ ಇಂದು ತೀರ್ಪು ಹೊರಬಿದ್ದಿದೆ. 
ಘಟನಾವಳಿಗಳು:
  • 2005ರ ನವೆಂಬರ್ 22-23ರಂದು ಸೊಹ್ರಾಬುದ್ದೀನ್, ಪತ್ನಿ ಕೌಸರ್ ಬಿ ಮತ್ತು ಸಹಚರ ತುಳಸಿರಾಮ್ ಪ್ರಜಾಪತಿ ಮೂವರೂ ಹೈದರಾಬಾದ್ ನಿಂದ ಅಹಮದಾಬಾದ್'ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗುಜರಾತ್ ಪೊಲೀಸರು ಇವರನ್ನು ಬಂಧನಕ್ಕೊಳಪಡಿಸಿ ಮಹಾರಾಷ್ಟ್ರ ಸಾಂಗ್ಲಿಗೆ ಕರೆದೊಯ್ದಿದ್ದರು. 
  • ನವೆಂಬರ್ 26 ರಂದು ಅಹಮದಾಬಾದ್ ನಲ್ಲಿ ನಕಲಿ ಎನ್'ಕೌಂಟರ್ ನಲ್ಲಿ ಸೊಹ್ರಾಬುದ್ದೀನ್ ಅವರನ್ನು ಹತ್ಯೆ ಮಾಡಲಾಗಿತ್ತು. 
  • ನವೆಂಬರ್ 28 ರಂದು ಕೌಸೆರ್ ಬಿ ಅವರ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಬಳಿಕ ಅವರ ದೇಹವನ್ನು ಸುಟ್ಟು ಹಾಕಲಾಗಿತ್ತು. 
  • 2005ರ ಡಿಸೆಂಬರ್: ಸೊಹ್ರಾಬುದ್ದೀನ್ ಅವರ ಸಹೋದರ ರುಬಾಬುದ್ದೀನ್ ಅವರು ಭಾರತೀಯ ಮುಖ್ಯ ನ್ಯಾಯಾಧೀಶಕರಿಗೆ ಪತ್ರ ಬರೆದು, ಸಹೋದರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್ ಗುಜರಾತ್ ಪೊಲೀಸರಿಗೆ ವಹಿಸಿತ್ತು. ಸೊಹ್ರಾಬುದ್ದೀನ್ ಹಾಗೂ ಅವರ ಪತ್ನಿ ಯಾವ ರೀತಿಯಲ್ಲಿ ಹತ್ಯೆಯಾದರು ಎಂಬುದರ ಮಾಹಿತಿ ಕಲೆ ಹಾಕುವಂತೆ ಸೂಚಿಸಿತ್ತು. 
  • 2006ರ ನವೆಂಬರ್: ಪತ್ರಕರ್ತ ಪ್ರಶಾಂತ್ ದಯಾಳ್ ಅವರಿದೆ ಇದೊಂದು ನಕಲಿ ಎನ್'ಕೌಂಟರ್ ಆಗಿದ್ದು, ಪಾನಮತ್ತ ಪೊಲೀಸ್ ಎನ್'ಕೌಂಟರ್ ನಡೆಸಿದ್ದಾನೆಂದು ದೈನಿಕ್ ಭಾಸ್ಕರ್ ನಲ್ಲಿ ವರದಿ ಪ್ರಕಟಿಸಿದ್ದರು. 
  • ಡಿಸೆಂಬರ್ 28, 2006: ಪೊಲೀಸ್ ಅಧಿಕಾರಿ ಡಿ.ಜಿ ವಂಜಾರಾ ಅವರ ಗ್ರಾಮ ಛಾಪ್ರಿಯಲ್ಲಿ ಸೊಹ್ರಾಬುದ್ದೀನ್ ಅವರ ಸಹಚರನಾಗಿದ್ದ ಪ್ರಜಾಪತಿಯನ್ನೂ ಹತ್ಯೆ ಮಾಡಲಾಗಿತ್ತು. 
  • 2007 ಏಪ್ರಿಲ್: ಪ್ರಜಾಪತಿ ಹತ್ಯೆ ಬಳಿಕ ಡಿಐಜಿ ಡಿ.ಜಿ ವಂಜಾರಾ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು. 
  • 2010 ಜನವರಿ: ಪ್ರಜಾಪತಿ ಹತ್ಯೆ ಬಳಿಕ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿತ್ತು. 
  • 2010 ಜುಲೈ 23: ತನಿಖೆ ಆರಂಭಿಸಿದ್ದ ಸಿಬಿಐ, ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೂ ಕೂಡ ಭಾಗಿಯಾಗಿದ್ದಾರೆಂದು ಚಾರ್ಜ್ ಶೀಟ್ ನಲ್ಲಿ ತಿಳಿಸಿತ್ತು. ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ್ದಾರೆಂಬ ಆರೋಪವನ್ನು ಮಾಡಲಾಗಿತ್ತು. 
  • 2010 ಜುಲೈ 25: ಅಮಿತ್ ಶಾ ಅವರನ್ನು ಸಿಬಿಐ ಬಂಧನಕ್ಕೊಳಪಡಿಸಿತ್ತು. 
  • 2010 ಅಕ್ಟೋಬಪ್ 29: ಪ್ರಕರಣ ಸಂಬಂಧ ಸುಧೀರ್ಘ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್ ಸಾಕ್ಷ್ಯಾಧಾರ ಕೊರತೆ ಕಾರಣ ನೀಡಿ ಅಮಿತ್ ಶಾ ಅವರಿಗೆ ಜಾಮೀನು ನೀಡಿತ್ತು. 
  • 2010 ಸೆಪ್ಟೆಂಬರ್ 27: ಸುಪ್ರೀಂಕೋರ್ಟ್ ಗುಜರಾತ್ ರಾಜ್ಯದಿಂದ ಮುಂಬೈಗೆ ಪ್ರಕರಣವನ್ನು ಸ್ಥಳಾಂತರ ಮಾಡಿತ್ತು. 
  • 2013 ಏಪ್ರಿಲ್ 8: ಸೊಹ್ರಾಬುದ್ದೀನ್ ಹತ್ಯೆ ಪ್ರಕರಣದೊಂದಿಗೆ ಪ್ರಜಾಪತಿ ಪ್ರಕರಣವನ್ನು ತಾಳೆ ಮಾಡಿದ್ದ ಸುಪ್ರೀಂಕೋರ್ಟ್
  • 2013 ಸೆಪ್ಟೆಂಬರ್: ಜೈಲಿನಲ್ಲಿಯೇ ಇದ್ದ ಡಿಐಜಿ ವಂಜಾಪರಾ ಅವರು ಗುಜರಾತ್ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದರು. ಪ್ರಕರಣಕ್ಕೆ ನಕಲಿ ಎನ್'ಕೌಂಟರ್ ಹೆಸರು ನೀಡುತ್ತಿರುವ ಸರ್ಕಾರ, ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಒಬ್ಬ ಪೊಲೀಸ್ ಅಧಿಕಾರಿ ಜೈಲಿನಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. 
  • 2014 ಡಿಸೆಂಬರ್ 30: ಪ್ರಕರಣ ಸಂಬಂಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಿಬಿಐ ನ್ಯಾಯಾಲಯ ಕ್ಲೀನ್ ಚಿಟ್ ನೀಡಿತ್ತು. 
  • 2016 ಆಗಸ್ಟ್ 1: ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. 
  • 2017 ಆಗಸ್ಟ್ 1: ವಂಜಾರಾ ಹಾಗೂ ಇತರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸಿಬಿಐ ಕೈಬಿಟ್ಟಿತ್ತು. 
  • 2017 ಡಿಸೆಂಬರ್ 3: ಅಂತಿಮ ಘಟ್ಟ ತಲುಪಿದ್ದ ಪ್ರಕರಣದ ವಿಚಾರಣೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com