ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ ಅನುಮತಿಗಾಗಿ ಸುಪ್ರೀಂ ಮೊರೆ ಹೋದ ಬಿಜೆಪಿ
ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ ನಡೆಸಲು ಅನುಮತಿ ನೀಡದ ಕಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ವಿರುದ್ಧ ಬಿಜೆಪಿ ನಿರೀಕ್ಷೆಯಂತೆ ಸುಪ್ರೀಂಕೋರ್ಟ್ ಗೆ ಇಂದು ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ ನಡೆಸಲು ಅನುಮತಿ ನೀಡದ ಕಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ವಿರುದ್ಧ ಬಿಜೆಪಿ ನಿರೀಕ್ಷೆಯಂತೆ ಸುಪ್ರೀಂಕೋರ್ಟ್ ನಲ್ಲಿಂದು ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಪಶ್ಚಿಮ ಬಂಗಾಳದಲ್ಲಿನ ಮೂರು ಜಿಲ್ಲೆಗಳಲ್ಲಿ ರಥಯಾತ್ರೆ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ತುರ್ತು ವಿಚಾರಣೆ ನಡೆಸುವಂತೆ ಬಿಜೆಪಿ ಮನವಿ ಮಾಡಿಕೊಂಡಿದೆ.ರಥಯಾತ್ರೆಗೆ ಅನುಮತಿ ನೀಡಿ ಕಲ್ಕತ್ತಾ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಶುಕ್ರವಾರ ರದ್ದುಗೊಳಿಸಿದ ವಿಭಾಗೀಯ ಪೀಠದ ತೀರ್ಪನ್ನು ಬಿಜೆಪಿ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದೆ.
2019 ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿನ 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಜಾಪ್ರಭುತ್ವ ಉಳಿಸಿ ರಥಯಾತ್ರೆ ಹಮ್ಮಿಕೊಂಡಿದ್ದು, ಇದಕ್ಕೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದೆ.
ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ವಿರುದ್ಧ ಬಿಜೆಪಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ರಿಜಿಸ್ಟ್ರೀ ಅಧಿಕಾರಿ ತಿಳಿಸಿದ್ದಾರೆ.
ರಥಯಾತ್ರೆಗೆ ಅನುಮತಿ ನೀಡಿ ಕಲ್ಕತ್ತಾ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ ಆದೇಶವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದರು.
ಈ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯನ್ಯಾಯಾಧೀಶ ದೆಬಾಸಿಶ್ ಕರ್ ಗುಪ್ತಾ ಮತ್ತು ನ್ಯಾಯಾಧೀಶ ಶಂಪಾ ಸರ್ಕಾರ ಅವರನ್ನೊಳಗೊಂಡ ಪೀಠ, ಏಕ ಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿತ್ತು,
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಡಿಸೆಂಬರ್ 7 ರಂದು ಪಶ್ಚಿಮ ಬಂಗಾಳದ ಕೊಚ್ ಬೆಹಾರ್, ಡಿಸೆಂಬರ್ 9 ರಂದು ದಕ್ಷಿಣ 24 ಪರಗಣದ ಕಾಕ್ಡ್ ವಿಪ್ ಹಾಗೂ ಡಿಸೆಂಬರ್ 14 ರಂದು ಬೆರ್ಹಮ್ ಜಿಲ್ಲೆಯ ತಾರಪ್ತಿ ದೇವಾಲಯದ ಬಳಿ ರಥಯಾತ್ರೆಗೆ ಚಾಲನೆ ನೀಡಬೇಕಾಗಿತ್ತು ಎಂಬುದು ತಿಳಿದುಬಂದಿದೆ.