ರಾಜ್ಯಸಭೆಯಲ್ಲಿ ಪ್ರಧಾನಿ ಪಕೋಡ ಹೇಳಿಕೆ ಸಮರ್ಥಿಸಿಕೊಂಡ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ರಾಜ್ಯಸಭೆ ಸದಸ್ಯರಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಕಡಿತಗೊಳಿಸಲು ಬಿಜೆಪಿ ಸರ್ಕಾರ ಮಾತ್ರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಅಮಿತ್ ಶಾ
ರಾಜ್ಯಸಭೆಯಲ್ಲಿ ಅಮಿತ್ ಶಾ
Updated on
ನವದೆಹಲಿ: ರಾಜ್ಯಸಭೆ ಸದಸ್ಯರಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಜಿಎಸ್ ಟಿ ಮತ್ತು ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದಾನ ನಿರ್ಣಯದ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ಪಕೋಡ ಮರಾಟ ಮಾಡುವುದೂ ಒಂದು ಉದ್ಯೋಗ ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. 
ಭಿಕ್ಷೆ ಬೇಡುವುದಕ್ಕಿಂತ ಪಕೋಡ ಮಾರುವುದು ಉತ್ತಮ ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರಿಗೆ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಸಂದರ್ಶನವೊಂದರಲ್ಲಿ ಪಕೋಡ ಮರಾಟ ಮಾಡುವುದೂ ಒಂದು ಉದ್ಯೋಗ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚಿದಂಬರಂ ಅವರು, ಪಕೋಡಾ ಮಾರುವುದೂ ಒಂದು ಉದ್ಯೋಗ ಎಂಬುದಾದರೆ ಭಿಕ್ಷೆ ಬೇಡುವುದೂ ಒಂದು ಉದ್ಯೋಗವೇ. ಇನ್ನು ಮೇಲೆ ತಮ್ಮ ಬದುಕನ್ನು ನಡೆಸುವುದಕ್ಕಾಗಿ ಭಿಕ್ಷೆ ಬೇಡುವ ಬಡ ಮತ್ತು ದುರ್ಬಲ ವರ್ಗದ ಜನರನ್ನೂ ಉದ್ಯೋಗಿಗಳು ಎಂದು ಪರಿಗಣಿಸೋಣ ಎಂದು ಚಿದಂಬರಂ ವ್ಯಂಗ್ಯವಾಡಿದ್ದರು.
ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಶಾ, 2014ರ ಲೋಕಸಭಾ ಚುನಾವಣೆ ದೇಶದ ಜನರ ಐತಿಹಾಸಿಕ ತೀರ್ಪಾಗಿತ್ತು. ಬಿಜೆಪಿ ಪಕ್ಷದ ಮೇಲೆ ವಿಶ್ವಾಸವಿಟ್ಟ ಮತದಾರರು, ದಾಖಲೆ ಪ್ರಮಾಣದಲ್ಲಿ ಬಿಜೆಪಿ  ಆಶೀರ್ವಧಿಸಿದ್ದರು. ಜನ ಈ ಹಿಂದಿನ ಸರ್ಕಾರಗಳ ಪೊಳ್ಳು ಭರವಸೆಯಿಂದ ಬೇಸತ್ತು, ತ್ವರಿತಗತಿಯ ಅಭಿವೃದ್ಧಿಗೆ ಹಾತೊರೆಯುತ್ತಿದ್ದರು. ಅವರ ಪ್ರಶ್ನೆಗೆ ಬಿಜೆಪಿ ಉತ್ತರವಾಗಿ ಕಂಡಿತ್ತು. ತನ್ನದೇ ಸ್ವಂತಬಲಹೊಂದಿದ್ದರೂ ಬಿಜೆಪಿ  ಪಕ್ಷ ತನ್ನ ಮಿತ್ರ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಸರ್ಕಾರ ರಚನೆ ಮಾಡಿತ್ತು. ಬಡವರ ಕಲ್ಯಾಣ ಈ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ರೈತರ ಅಭಿವೃದ್ಧಿ ಸರ್ಕಾರದ ಧ್ಯೇಯೋದ್ದೇಶವಾಗಿದೆ. ರೈತರು ಮತ್ತು ಬಡವರ  ಕಲ್ಯಾಣಕ್ಕಾಗಿ ಸರ್ಕಾರ ಕಾರ್ಯನಿರತವಾಗಿದೆ.
ದೇಶದಲ್ಲಿ ಸುಮಾರು 70 ವರ್ಷಗಳ ಕಾಲ ಆಡಳಿತ ನಡೆಸಿದ್ದ ಒಂದು ಕುಟುಂಬ ಜನರ ನಂಬಿಕೆ ಕಳೆದುಕೊಂಡಿತ್ತು. ಮತ್ತೊಂದು ಪಕ್ಷದ ಮೇಲೆ ಭರವಸೆ ಇಟ್ಟಿದ್ದರಿಂದ ಆ ಪಕ್ಷ ಇಂದು ದೇಶಾದ್ಯಂತ ತನ್ನ ಪ್ರಚಂಡ ಶಕ್ತಿಯೊಂದಿಗೆ  ಮುಂದುವರೆದಿದೆ. ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ದೇಶಾದ್ಯಂತ ಕೇಂದ್ರ ಸರ್ಕಾರ ಲಕ್ಷಾಂತರ ಶೌಚಾಲಯಗಳನ್ನು ನಿರ್ಮಿಸುತ್ತಿದೆ.ಇದರಿಂದ ಬಹಿರ್ದೆಸೆ ವೇಳೆ ಮಹಿಳೆಯರು ಮತ್ತು ಇತರರು ಅನುಭವಿಸುತ್ತಿದ್ದ ಸಮಸ್ಯೆ  ನೀಗುತ್ತಿದ್ದು, ಇನ್ನು ಕೆಲವೇ ತಿಂಗಳಲ್ಲಿ ಭಾರತ ಬಹಿರ್ದೆಸೆ ಮುಕ್ತ ರಾಷ್ಟ್ರವಾಗಲಿದೆ.
ಈ ಹಿಂದಿನ ಸರ್ಕಾರಗಳೂ ಸ್ವಚ್ಛಭಾರತ ಕುರಿತ ಯೋಜನೆಗಳನ್ನು ಜಾರಿಗೆ ತಂದಿದ್ದವಾದರೂ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡದೇ ಕೇವಲ ಚುನಾವಣಾ ಪ್ರಣಾಳಿಕೆಯನ್ನಾಗಿಸಿಕೊಂಡಿದ್ದವು. ನಮ್ಮ ಸರ್ಕಾರ ಇದೀಗ ಅದನ್ನು ಮಾಡಿತೋರಿಸುತ್ತಿದೆ. ಇಂದು ಮಹಿಳೆಯರು ಬಹಿರ್ದೆಸೆಗಲ್ಲ.. ತಮ್ಮ ಭವಿಷ್ಯ ರೂಪಣೆಗಾಗಿ ಹೊರಗೆ ಹೋಗುತ್ತಿದ್ದಾರೆ. ಸಾಧನೆ ಗೈಯುತ್ತಿದ್ದಾರೆ. ಗರೀಬಿ ಹಠಾವೋ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿದ್ದ  ಸರ್ಕಾರ ಆ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಈ ಕುರಿತು ಗಂಭೀರವಾಗಿ ಕಾರ್ಯ ನಿರ್ವಹಿಸಿದೆ. ಪ್ರಸ್ತುತ ನಿರುದ್ಯೋಗ ಮತ್ತು ಉದ್ಯೋಗ ಸೃಷ್ಟಿಯಲ್ಲಿ ನಾವು ಹಿಂದಿರಬಹುದು. ಆದರೆ ಈ ಹಿಂದಿನ  60 ವರ್ಷಗಳ ಆಡಳಿತದಲ್ಲಿದ್ದಷ್ಟು ಕೆಳ ಮಟ್ಟದಲ್ಲಿ ನಾವಿಲ್ಲ. 
ನಿರುದ್ಯೋಗ ಸಮಸ್ಯೆ ನೀಗಿಸುವುದಕ್ಕಾಗಿ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಹಲವು ಯೋಜನೆಗಳನ್ನು ರೂಪಿಸಿದೆ. ಪರಿಣಾಮ ಇಂದು ಲಕ್ಷಾಂತರ ಸ್ಟಾರ್ಟ್ ಅಪ್ ಗಳು ಹುಟ್ಟಿಕೊಂಡಿದ್ದು, ದೇಶದ ನಿರುದ್ಯೋಗ ಸಮಸ್ಯೆ  ಕ್ರಮೇಣ ನೀಗುತ್ತಿದೆ.  ಭವಿಷ್ಯದಲ್ಲಿ ಮತ್ತಷ್ಟು ಯೋಜನೆಗಳು ಕ್ರಮಗಳು ಜಾರಿಯಾಗುವ ಸಾಧ್ಯತೆ ಇದ್ದು, ಮತ್ತಷ್ಟು ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ದೇಶದ ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನ ಸುಧಾರಣೆಗಾಗಿ ಕೇಂದ್ರ  ಸರ್ಕಾರ ಆರಂಭದಿಂದಲೂ ಕಾರ್ಯಪ್ರವೃತ್ತವಾಗಿದ್ದು, ಸಾಕಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ವಿಶ್ವದಲ್ಲಿ ಭಾರತ ದೇಶವನ್ನು ಬಲಿಷ್ಟ ರಾಷ್ಟ್ರವಾಗಿಸುವ ಕನಸಿನೊಂದಿಗೆ ನಾವು ನಿರಂತರ ಕಾರ್ಯ ನಿರ್ವಹಿಸುತ್ತಿದ್ದೇವೆ. ಇದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಅಮಿತ್ ಶಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com