ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ದೈನಂದಿನ ಸಭೆ(ಶಾಖೆ)ಯಲ್ಲಿ ಭಾಗವಹಿಸದವರು ಹಿಂದೂಗಳೇ ಅಲ್ಲ ಎಂದು ಹೈದರಾಬಾದ್ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.
ಕಳೆದ ಭಾನುವಾರ ವಿಧಾನ ಸಭೆ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಸಭೆಯೊಂದರಲ್ಲಿ ಮಾತನಾಡಿದ ರಾಜಾ ಸಿಂಗ್, ಆರ್ ಎಸ್ಎಸ್ ಒಂದು ಕಾರ್ಖಾನೆ ಇದ್ದಂತೆ. ಈ ಕಾರ್ಖಾನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತ ಮಹಾನ್ ವ್ಯಕ್ತಿಗಳು ಸೃಷ್ಠಿಯಾಗುತ್ತಾರೆ ಎಂದು ಹೇಳಿದ್ದಾರೆ.
ಸಮೀಪದ ಯಾವುದಾದರು ಆರ್‌ಎಸ್‌ಎಸ್ ಶಾಖೆಗೆ ಭೇಟಿ ನೀಡಿ, ನೀವೂ ಸದಸ್ಯತ್ವ ಪಡೆದುಕೊಳ್ಳಿ ಎಂದು ಮನವಿ ಮಾಡಿದ ಬಿಜೆಪಿ ಶಾಸಕ, ಆರ್ ಎಸ್ಎಸ್ ಸೇರದ ಯಾವುದೇ ಹಿಂದೂ ನಿಜವಾದ ಹಿಂದೂ ಅಲ್ಲ ಮತ್ತು ದೇಶ ಸೇವೆ ಮಾಡಲು ಅವರು ಅಸಮರ್ಥರು ಎಂದಿದ್ದಾರೆ.
ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರು ತಮ್ಮ ಧರ್ಮದ ಹೊರತಾಗಿಯೂ 'ಭಾರತ್ ಮಾತಾ ಕೀ ಜೈ' ಹಾಗೂ 'ವಂದೇ ಮಾತರಂ' ಹೇಳಲೇಬೇಕು. ಹೇಳದವರು ದೇಶ ತೊರೆಯಬೇಕು. ಪ್ರಪಂಚದ ಯಾವುದೇ ರಾಷ್ಟ್ರವೂ ಶತ್ರು ರಾಷ್ಟ್ರ ಹಾಗೂ ಭಯೋತ್ಪಾದನೆ ಬೆಂಬಲಿಸುವವರನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ದೇಶದಲ್ಲಿ ಹೊಲಸು ರಾಜಕೀಯ ಮಾಡುತ್ತಿರುವ ಓವೈಸಿ ಸಹೋದರರಿಂದ ಮುಸ್ಲಿಮರು ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಇಂಥವರ ದಾಳಕ್ಕೆ ಯಾರೂ ಬಲಿಯಾಗಬಾರದು ಎಂದು ರಾಜಾ ಸಿಂಗ್ ಕರೆ ನೀಡಿದ್ದಾರೆ.