ಬಾಡಿಗೆ ತಾಯಿ ಮೂಲಕ ಮಗು ಪಡೆಯುವವರಿಗೂ ಹೆರಿಗೆ ರಜೆ: ಕೇಂದ್ರ ಸರ್ಕಾರದ ಹೊಸ ಆದೇಶ

ಬಾಡಿಗೆ ತಾಯಿ ಮೂಲಕ ಮಗು ಪಡೆಯುವವರಿಗೂ ಹೆರಿಗೆ ರಜೆ ನೀಡುವ ಮಹತ್ವದ ಆದೇಶವನ್ನು ಗುರುವಾರ ಕೇಂದ್ರ ಸರ್ಕಾರ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಾಡಿಗೆ ತಾಯಿ ಮೂಲಕ ಮಗು ಪಡೆಯುವವರಿಗೂ ಹೆರಿಗೆ ರಜೆ ನೀಡುವ ಮಹತ್ವದ ಆದೇಶವನ್ನು ಗುರುವಾರ ಕೇಂದ್ರ ಸರ್ಕಾರ ಹೊರಡಿಸಿದೆ.
ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುವ ಮಹಿಳಾ ಉದ್ಯೋಗಿಗಳೂ ಹೆರಿಗೆ ರಜೆ ಸೌಲಭ್ಯ ಪಡೆಯಲು ಅರ್ಹರು ಎಂದು ಸರ್ಕಾರದ ನೂತನ ಆದೇಶದಲ್ಲಿ ತಿಳಿಸಲಾಗಿದ್ದು, ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುವ ಮಹಿಳಾ ಉದ್ಯೋಗಿಗಳೂ ಇನ್ನು ಮುಂದೆ 26 ವಾರ (180 ದಿನದ) ಹೆರಿಗೆ ರಜೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ. 
ಈ ವಿಷಯದ ಕುರಿತು 2015ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ಕುರಿತು ಸಚಿವಾಲಯವು ಕೇಂದ್ರ ಸರ್ಕಾರದ ಎಲ್ಲಾ ವಿಭಾಗಗಳಿಗೆ ಪತ್ರ ಬರೆದಿದ್ದು, ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಎಲ್ಲಾ ಸಚಿವಾಲಯಗಳಿಗೆ ಹಾಗೂ ಇಲಾಖೆಗಳಿಗೆ ತಿಳಿಸಿ, ದೆಹಲಿ ಹೈಕೋರ್ಟ್‌ನ ಆದೇಶದ ಪ್ರತಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿಗೆ, ಆಕೆ ಜೈವಿಕ ತಾಯಿಯಲ್ಲ ಎಂಬ ಕಾರಣ ನೀಡಿ ಹೆರಿಗೆ ರಜೆ ನೀಡಲು ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ದೆಹಲಿ  ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿ ನ್ಯಾಯಾಲಯ, ಅಧಿಕೃತ ತಾಯಿಯಾಗುವ ಎಲ್ಲಾ ಮಹಿಳಾ ಉದ್ಯೋಗಿಗಳೂ ಹೆರಿಗೆ ಭತ್ಯೆ ಪಡೆಯಲು ಅರ್ಹರು ಎಂದು ತಿಳಿಸಿತ್ತು. 
ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ಸಂದರ್ಭ ಮಹಿಳಾ ಉದ್ಯೋಗಿ ಹೆರಿಗೆ ರಜೆ ಕೋರುವ ದಿನ ಹಾಗೂ ಸಮಯದ ಕುರಿತು ಸಂಬಂಧಿತ ಅಧಿಕಾರಿಗಳು ನಿರ್ಧಾರ ಕೈಗೊಳ್ಳುತ್ತಾರೆ. ಬಾಡಿಗೆ ತಾಯಿ ಹಾಗೂ ಆಕೆಯ ಮೂಲಕ ಮಗು ಪಡೆಯುವರು ಇಬ್ಬರೂ ಸರ್ಕಾರಿ ಉದ್ಯೋಗಿಗಳಾಗಿದ್ದಲ್ಲಿ ಇಬ್ಬರೂ ಹೆರಿಗೆ ರಜೆ ಪಡೆಯುವ ಅರ್ಹತೆ ಹೊಂದಿರುವ ಸಂದರ್ಭ(ಒಬ್ಬಳು ಬಾಡಿಗೆ ತಾಯಿ, ಇನ್ನೊಬ್ಬಳು ಅಧಿಕೃತ ತಾಯಿ) ಅಧಿಕಾರಿಗಳು ನಿಯಮದಲ್ಲಿ ಸೂಕ್ತ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com