ಪ್ರತಿಭಟನೆಗೆ ಮಣಿದ ಕೇಂದ್ರ, ಆಂಧ್ರ ಪ್ರದೇಶಕ್ಕೆ 1269 ಕೋಟಿ ಅನುದಾನ!

ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಆಂಧ್ರ ಸಂಸದರು ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಕೇಂದ್ರ ಸರ್ಕಾರ ಮಣಿದಿದ್ದು, 1269 ಕೋಟಿ ರೂ.ಗಳ ಆರ್ಥಿಕ ಅನುದಾನ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಆಂಧ್ರ ಸಂಸದರು ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಕೇಂದ್ರ ಸರ್ಕಾರ ಮಣಿದಿದ್ದು, 1269 ಕೋಟಿ ರೂ.ಗಳ ಆರ್ಥಿಕ ಅನುದಾನ ಘೋಷಣೆ ಮಾಡಿದೆ.
ಈ ಬಗ್ಗೆ ಕೇಂದ್ರ ನೀರಾವರಿ ಇಲಾಖೆಯ ಜಂಟಿ ಆಯುಕ್ತ ಆರ್ ಪಿಎಸ್ ವರ್ಮಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ವಿಭಜಿತ ಆಂಧ್ರ ಪ್ರದೇಶಕ್ಕೆ ಒಟ್ಟು 1269 ಕೋಟಿ ರೂ.ಗಳ ಆರ್ಥಿಕ ಅನುದಾನ ಘೋಷಿಸಲಾಗಿದೆ ಎಂದು  ಮಾಹಿತಿ ನೀಡಿದರು. ಈ ಪೈಕಿ ಟಿಡಿಪಿ ಮತ್ತು ಬಿಜೆಪಿ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ಪೋಲವರಂ ನೀರಾವರಿ ಯೋಜನೆಗೆ 417.44 ಕೋಟಿ ರೂ ಮೀಸಲಿರಿಸಲಾಗಿದ್ದು, ಸ್ಥಳೀಯ ನಗರಾಭಿವೃದ್ಧಿ ಸಂಸ್ಷೆಗಳಿಗೆ ಒಟ್ಟು 253.74  ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಅಂತೆಯೇ ಅಂಗನವಾಡಿ ಯೋಜನೆ ಮತ್ತು ಪೂರಕ ಪೋಷಕ ಆಹಾರ ಯೋಜನೆಗೆ 196.92 ಕೋಟಿ ಮತ್ತು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 31.76   ಕೋಟಿ ನೀಡಲಾಗಿದೆ.
ಇನ್ನು ಆದಾಯದ ಕೊರತೆ ಅನುದಾನ ಅಡಿಯಲ್ಲಿ 369.16 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದೇ ವಿಚಾರ ಸಂಬಂಧ ಪೋಲವರಂ ನೀರಾವರಿ ಯೋಜನೆ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದು,  ಈ ಬಹು ಉದ್ದೇಶಿತ ಯೋಜನೆಗಾಗಿ ಪ್ರಾಧಿಕಾರ ಒಟ್ಟು 4,329 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದೆ. ಅಂತೆಯೇ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ ಬಳಿಕ ರಾಜ್ಯ ಸರ್ಕಾರ 7,200 ಖರ್ಚು  ಮಾಡಿದೆ ಎಂದು ಹೇಳಿದೆ. 
ಒಟ್ಟಾರೆ ಆಂಧ್ರ ಪ್ರದೇಶ ಸಂಸದರ ಪ್ರತಿಭಟನೆ ಎದುರಿಸುತ್ತಿದ್ದ ಕೇಂದ್ರ ಸರ್ಕಾರ ವಿಭಜಿತ ಆಂಧ್ರ ಪ್ರದೇಶಕ್ಕೆ ಅನುದಾನ ನೀಡುವ ಮೂಲಕ ಸಂಸದರ ಶಾಂತವಾಗಿಸುವ ಪ್ರಯತ್ನ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com