ಪಣಜಿ: ಹೆಣ್ಣುಮಕ್ಕಳು ಮದ್ಯಪಾನ ಮಾಡುವ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಟ್ವಿಟ್ಟರ್ ನಲ್ಲಿ ಈ ಕುರಿತು ಅನೇಕರು ಪ್ರತಿಕ್ರಿಯಿಸಿದ್ದಾರೆ. #GirlsWhoDrinkBeer ಎಂಬ ಹ್ಯಾಶ್ ಟಾಗ್ ನೊಂದಿಗೆ ಮನೋಹರ್ ಪರ್ರಿಕರ್ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ.
ಮೊನ್ನೆ ಶುಕ್ರವಾರ ಗೋವಾ ಸರ್ಕಾರ ಆಯೋಜಿಸಿದ್ದ ಯುವ ಸಂಸದ ಮುಕ್ತ ಸಂದರ್ಶನದಲ್ಲಿ ಮುಖ್ಯಮಂತ್ರಿ ಮಾತನಾಡಿ, ತಮ್ಮ ರಾಜ್ಯದಲ್ಲಿ ಹೆಣ್ಣುಮಕ್ಕಳು ಮದ್ಯಪಾನ ಮಾಡುತ್ತಿರುವ ಸಂಖ್ಯೆ ನೋಡಿದರೆ ಆತಂಕವಾಗುತ್ತಿದೆ. ಹುಡುಗಿಯರು ತಮ್ಮ ಎಲ್ಲೆಯನ್ನು ಮೀರುತ್ತಿದ್ದಾರೆ ಎಂದು ಹೇಳಿದ್ದರು.
ವಿದ್ಯಾರ್ಥಿಗಳಿಂದ ಬಂದ ಅನೇಕ ಪ್ರಶ್ನೆಗಳಿಗೆ ಪರ್ರಿಕರ್ ತಮ್ಮ ಶಾಲಾ, ಕಾಲೇಜು ದಿನಗಳಿಗೆ ಹೋಲಿಸಿ ಉತ್ತರ ಕೊಟ್ಟಿದ್ದರು.
ನಾನು 11-12 ವರ್ಷದವನಾಗಿದ್ದಾಗ ಕೆಲವು ವಿದ್ಯಾರ್ಥಿಗಳು ಅಶ್ಲೀಲ ಸಿನಿಮಾಗಳನ್ನು ವೀಕ್ಷಿಸುತ್ತಿದ್ದರು. ಐಐಟಿ ಪದವಿ ಓದುತ್ತಿದ್ದಾಗ ಗಾಂಜಾ, ಅಫೀಮುಗಳಂತಹ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದ ವಿದ್ಯಾರ್ಥಿಗಳ ಗುಂಪು ಇತ್ತು ಎಂದು ಪರ್ರಿಕರ್ ಹೇಳಿದ್ದರು.
ಗೋವಾ ರಾಜ್ಯದಲ್ಲಿನ ಕಾಲೇಜುಗಳಲ್ಲಿ ಡ್ರಗ್ಸ್ ಗಳ ಸೇವನೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಜನರು ಹೇಳುತ್ತಾರೆ. ನನಗೆ ಹಾಗೆ ಅನ್ನಿಸುವುದಿಲ್ಲ. ವಿದ್ಯಾರ್ಥಿಗಳು ಸತ್ಯ ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕುಡಿಯುವುದು ನನಗೆ ಗಾಬರಿಯನ್ನು ಹುಟ್ಟಿಸುತ್ತಿದೆ. ಎಲ್ಲಾ ಹುಡುಗಿಯರು ಹೀಗೆ ಮಾಡುತ್ತಾರೆ ಎಂದು ನಾನು ಹೇಳುವುದಿಲ್ಲ. ಯಾಕೆಂದರೆ ಎಲ್ಲಾ ಹುಡುಗಿಯರು ಕುಡಿಯುವುದಿಲ್ಲ ಎಂದು ಕೂಡ ಹೇಳಿದ್ದರು.
ಈ ಹೇಳಿಕೆ ನೀಡಿ ಅದು ಸುದ್ದಿಯಾಗುತ್ತಿದ್ದಂತೆ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅನೇಕ ಟ್ವೀಟ್ ಗಳಲ್ಲಿ ಹುಡುಗಿಯರು ಬೀರು ಕೈಯಲ್ಲಿ ಹಿಡಿದುಕೊಂಡು ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಂಡಿತಾ ಇದು ಕಲಿಯುಗ! ಹುಡುಗಿಯರು ಬೀರು ಕುಡಿಯುವುದು, ಮಹಿಳೆಯರು ಜೋರಾಗಿ ನಗುವುದು! ಮತ್ತು ಇನ್ನು ವ್ಯಾಲಂಟೈನ್ಸ್ ಡೇಯ ಲೀಲೆಗಳು ಬಾಕಿ ಇವೆ ಎಂದು ಹಿರಿಯ ಪತ್ರಕರ್ತೆ ಮ್ರಿನಾಲ್ ಪಾಂಡೆ ಟ್ವೀಟ್ ಮಾಡಿದ್ದಾರೆ.
ಮಹಿಳೆಯರು ವಯಸ್ಕರ ಸಿನಿಮಾಗಳನ್ನು ನೋಡುತ್ತಾರೆ, ಸಿಗರೇಟು ಸೇದುತ್ತಾರೆ, ದ್ವಂದ್ವಾರ್ಥದಲ್ಲಿ ಮಾತನಾಡುತ್ತಾರೆ ಎಂದೆಲ್ಲ ಗೊತ್ತಾದರೆ ಮನೋಹರ್ ಪರ್ರಿಕರ್ ಅವರಿಗೆ ತಿಂಗಳುಗಟ್ಟಲೆ ಖಂಡಿತಾ ದುಸ್ವಪ್ನ ಕಾಡುತ್ತದೆ ಎಂದು ಟೀಕಿಸಿದ್ದಾರೆ ಹಿರಿಯ ಬರಹಗಾರ್ತಿ ಸನಿಯಾ ಸಯೆದ್.
ನೀವು ಹುಡುಗಿಯರಿಂದ ಏನು ನಿರೀಕ್ಷಿಸುತ್ತೀರಿ? ಎಂದು ಮಹಿಳೆಯರ ವಿಷಯವಾಗಿ ಬರೆಯುವ ಪತ್ರಕರ್ತೆ ಅಕಂಶ ಸಿಂಗ್ ಕೇಳಿದ್ದಾರೆ. ಪುರುಷರ ಲೈಂಗಿಕಾಸಕ್ತಿಗಳನ್ನು ತೀರಿಸಿ ಅವರಿಗೆ ಸಾಕಷ್ಟು ಗಂಡುಮಕ್ಕಳನ್ನು ಯಾವುದೇ ಪ್ರಶ್ನೆ ಮಾಡದೆ ಹುಟ್ಟಿಸಲು ಇರುವವರೇ? ಹುಡುಗಿಯರು ಮದ್ಯಪಾನ ಮಾಡಿದರೆ ಅದರಲ್ಲೇನು ತಪ್ಪು. ಹುಡುಗಿಯರಾದ ನಾವು ಬೀರ್ ಮಾತ್ರ ಕುಡಿಯುತ್ತೇವೆ, ನಿಮ್ಮ ರಕ್ತವನ್ನಲ್ಲ ಅದಕ್ಕೆ ನೀವು ಕೃತಜ್ಞರಾಗಿರಬೇಕೆಂದು ಅವರ ಟ್ವೀಟ್ ಮಾಡಿದ್ದಾರೆ.
Scared Manohar Parrikar will have nightmare for months if he gets to know that women watch porn, smoke cigarettes, give gaalis, understand and share all double-meaning jokes.#GirlsWhoDrinkBeer