

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ದಾಳಿಯಲ್ಲಿ ಐವರು ಕಾಶ್ಮೀರಿ ಮುಸ್ಲಿಮರು ಮೃತಪಟ್ಟಿರುವುದರ ಬಗ್ಗೆ ಮಾತನಾಡಿರುವ ಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಒವೈಸಿ ಮುಸ್ಲಿಮರ ದೇಶಪ್ರೇಮವನ್ನು ಪ್ರಶ್ನಿಸುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಮರ ದೇಶಪ್ರೇಮವನ್ನು ಪ್ರಶ್ನಿಸುವವರು ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ದಾಳಿಯಲ್ಲಿ ಮುಸ್ಲಿಮರು ಮೃತಪಟ್ಟಿರುವ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಪ್ರತಿ ರಾತ್ರಿ 9 ಕ್ಕೆ ಟಿವಿಗಳಲ್ಲಿ ಮುಸ್ಲಿಮರ ದೇಶಪ್ರೇಮವನ್ನು ಪ್ರಶ್ನಿಸಲಾಗುತ್ತದೆ, ಕಾಶ್ಮೀರಿಗಳ ಬಗ್ಗೆಯೂ ಪ್ರಶ್ನೆ ಕೇಳಲಾಗುತ್ತದೆ. ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ದಾಳಿಯಲ್ಲಿ ಮೃತಪಟ್ಟಿರುವ 7 ಜನರ ಪೈಕಿ 5 ಜನರು ಮುಸ್ಲಿಮರು ಓರ್ವ ಗರ್ಭಿಣಿ ಸಹ ಮೃತಪಟ್ಟಿದ್ದಾರೆ. ಈಗ ಈ ಸಾವುಗಳ ಬಗ್ಗೆ ಎಲ್ಲರದ್ದೂ ಮೌನ, ಈ ವಿಷಯದ ಬಗ್ಗೆ ಯಾಕೆ ಎಲ್ಲರದ್ದೂ ಮೌನ ಎಂದು ಒವೈಸಿ ಪ್ರಶ್ನಿಸಿದ್ದಾರೆ.
ಜಮ್ಮು-ಕಾಶ್ಮೀರದ ಘಟನೆ ಮುಸ್ಲಿಮರ ದೇಶಪ್ರೇಮ ಹಾಗೂ ಮುಸ್ಲಿಮರನ್ನು ಪಾಕಿಸ್ತಾನಿಗಳು ಎನ್ನುವವರು ಪಾಠ ಕಲಿಯಬೇಕಿದೆ ಎಂದು ಹೇಳಿದ್ದಾರೆ. ಭಯೋತ್ಪಾದಕರು ಮುಸ್ಲಿಮರನ್ನೂ ಉಳಿಸುತ್ತಿಲ್ಲ, ಎಲ್ಲರನ್ನೂ ಭಾರತೀಯರೆಂದೇ ಪರಿಗಣಿಸುತ್ತಾರೆ, ಆದರೆ ನಮ್ಮ ದೇಶದವರು ಮುಸ್ಲಿಮರ ಬದ್ಧತೆಯನ್ನು ಪ್ರಶ್ನಿಸುತ್ತಾರೆ ಎಂದು ಒವೈಸಿ ಹೇಳಿದ್ದಾರೆ.