ಪ್ರೇಮಿಗಳ ದಿನಕ್ಕೆ ಶುಭ ಕೋರಿದ ದೆಹಲಿ ವಿವಿ ವಿದ್ಯಾರ್ಥಿನಿಗೆ ಸಿಎಂ ಕೇಜ್ರಿವಾಲ್ ಏನು ಹೇಳಿದರು ಗೊತ್ತಾ?

ಪ್ರೇಮಿಗಳ ದಿನದಂದು ದೆಹಲಿ ವಿಶ್ವವಿದ್ಯಾಲದ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರೇಮಿಗಳ ದಿನದಂದು ದೆಹಲಿ ವಿಶ್ವವಿದ್ಯಾಲದ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ನಿನ್ನೆ ಪ್ರೇಮಿಗಳ ದಿನವಾಗಿದ್ದು, ಅಂತೆಯೇ ಅರವಿಂದ್ ಕೇಜ್ರಿವಾಲ್ ನೇತೃತ್ವ ದೆಹಲಿ ಸರ್ಕಾರ 3 ವರ್ಷ ಪೂರ್ಣಗೊಳಿಸಿದೆ. ಈ ನಿಟ್ಟಿನಲ್ಲಿ ನಿನ್ನೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಾಮಾಜಿಕ ಜಾಲತಾಣ ಮತ್ತು ಫೋನ್ ಇನ್  ಮೂಲಕ ಸಾರ್ವಜನಿಕರಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದು, ಈ ವೇಳೆ ಸಾವಿರಾರು ಮಂದಿ ದೆಹಲಿ ಸಿಎಂಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ  ಉತ್ತರಿಸಿದ ಕೇಜ್ರಿವಾಲ್, 'ದ್ವೇಷವನ್ನು ಪ್ರೀತಿಯಿಂದ ಮಾತ್ರ ಸೋಲಿಸಲು ಸಾಧ್ಯ'  ಎಂದು ಹೇಳಿದ್ದಾರೆ.
ಇನ್ನು ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಟೀಕೆಗೆ ಬಳಸಿಕೊಂಡ ಸಿಎಂ ಕೇಜ್ರಿವಾಲ್ ತಮ್ಮದೇ ಶೈಲಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯುವಕರಿಗೆ ನಿಮ್ಮ ಸಂದೇಶವೇನು ಎಂದು ಕೇಳಿದ  ವಿದ್ಯಾರ್ಥಿನಿಗೆ ಉತ್ತರಿಸಿದ ಕೇಜ್ರಿವಾಲ್, ದೇಶವನ್ನು ಜಾತಿ ಮತ್ತು ಧರ್ಮದ ಹೆಸರಲ್ಲಿ ಇಭ್ಭಾಗ ಮಾಡುವ ಪ್ರಯತ್ನಗಳು ಸಾಗುತ್ತಿದೆ. ದ್ವೇಷಕ್ಕೆ ದ್ವೇಷವೇ ಉತ್ತರವಲ್ಲ. ದ್ವೇಷವನ್ನು ಪ್ರೀತಿಯಿಂದ ಮಣಿಸಬಹುದು. ವಿಭಜನೆಯ  ರಾಜಕೀಯವನ್ನು ಕೂಡಲೇ ತಡೆಯಬೇಕಿದ್ದು, ಇದು ನಿಜಕ್ಕೂ ಕಳವಳಕಾರಿ ಬೆಳವಣಿಗೆಯಾಗಿದೆ. ದೇಶದ ಜನರೇ ವಿಭಜನೆಯ ರಾಜಕೀಯದ ಕುರಿತು ಸಾಮೂಹಿಕ ಕಠಿಣ ನಿರ್ಧಾರ ತಳೆಯಬೇಕಿದೆ ಎಂದು  ಹೇಳಿದರು. ಅಂತೆಯೇ  ತಮ್ಮ ಸರ್ಕಾರ ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿಯನ್ನೇ ಅಜೆಂಡಾವಾಗಿರಿಸಿಕೊಂಡು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com