ಮುಂಬೈ: ಉದ್ಯಮಿಯೊಬ್ಬರು ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ವಿಷ ಉಣಿಸಿ ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
38 ವರ್ಷದ ನಿಲೇಶ್ ಚೌಧರಿ ಆತ್ಮಹತ್ಯೆಗೆ ಶರಣಾದ ಉದ್ಯಮಿ. ಪತ್ನಿ 33 ವರ್ಷದ ನೀಲಂ, ಮಕ್ಕಳಾದ 9 ವರ್ಷದ ಶ್ರಾವಣಿ ಮತ್ತು 7 ವರ್ಷದ ಶ್ರೇಯಾ ಮೃತ ದುರ್ದೈವಿಗಳು ಎಂದು ಉತ್ತಂ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹೇಮಂತ್ ಭಟ್ ತಿಳಿಸಿದ್ದಾರೆ.
ನಿಲೇಶ್ ಚೌಧರಿ ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿದ್ದು ಪತ್ರದಲ್ಲಿ ನಾನು ಆರ್ಥಿಕ ತೊಂದರೆಗಳಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನಿಲೇಶ್ ಚೌಧರಿ ಪ್ಲಾಸ್ಟಿಕ್ ರಿಮೋಲ್ಡಿಂಗ್ ಬಿಸಿನೆಸ್ ನಡೆಸುತ್ತಿದ್ದರು.
ಶುಕ್ರವಾರ ರಾತ್ರಿ ನಿಲೇಶ್ ಚೌಧರಿ ಮೃತದೇಹ ಫ್ಲಾಟ್ ನಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ ಪತ್ನಿ ಮತ್ತು ಮಕ್ಕಳ ಮೃತದೇಹ ಹಾಸಿಗೆ ಮೇಲೆ ಪತ್ತೆಯಾಗಿದೆ ಎಂದು ಭಟ್ ಹೇಳಿದ್ದಾರೆ.