ಮೇಘಾಲಯದಲ್ಲಿ ಐಇಡಿ ಸ್ಫೋಟ: ಎನ್'ಸಿಪಿ ಅಭ್ಯರ್ಥಿ ಸೇರಿ ನಾಲ್ವರು ಬಲಿ
ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಮೇಘಾಲಯದ ಪಶ್ಚಿಮ ಗಾರ್ಗೋ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಎನ್'ಸಿಪಿ ಅಭ್ಯರ್ಥಿ ಜೊನಾಥನ್ ಸಂಗ್ಮಾ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆಂದು ಸೋಮವಾರ ತಿಳಿದುಬಂದಿದೆ...
ನವದೆಹಲಿ: ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಮೇಘಾಲಯದ ಪಶ್ಚಿಮ ಗಾರ್ಗೋ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಎನ್'ಸಿಪಿ ಅಭ್ಯರ್ಥಿ ಜೊನಾಥನ್ ಸಂಗ್ಮಾ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಜೊನಾಥನ್ ಸಂಗ್ಮಾ ಅವರ ಬೆಂಗಾವಲು ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ, ಐಇಡಿ ಸ್ಫೋಟಿಸಿದ್ದಾರೆ. ಸಂಜೆ 7.30ರ ಸಮಯದಲ್ಲಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಸಂಗ್ಮಾ ಅವರ ಜೊತೆಗಿದ್ದ ಮೂವರೂ ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಸಂಗ್ಮಾ ವಿಲಯಂ ನಗರ್ ಕ್ಷೇತ್ರದಿಂದ ಎನ್'ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ದಾಳಿಯ ಹೊಣೆಯನ್ನು ಈವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತಿಕೊಂಡಿಲ್ಲ. ಸಂಗ್ಮಾ ಅವರು ಇತ್ತೀಚೆಗಷ್ಟೇ ಎನ್'ಸಿಪಿಗೆ ಸೇರ್ಪಡೆಗೊಂಡಿದ್ದರು. 2013ರ ಚುನಾವಣೆಯಲ್ಲಿ ಸ್ಪಲ್ಪದರಲ್ಲೇ ಗೆಲುವಿನಿಂದ ವಂಚಿತರಾಗಿದ್ದರು.
ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸಂತಾಪ
ಉಗ್ರರ ದಾಳಿಯಲ್ಲಿ ಜೊನಾಥನ್ ಸಂಗ್ಮಾ ಅವರು ಮೃತಪಟ್ಟಿರುವ ಹಿನ್ನಲೆಯಲ್ಲಿ ಮುಖ್ಯಂತ್ರಿ ಮುಕುಲ್ ಸಂಗ್ಮಾ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ದಾಳಿ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಜೊನಾಥನ್ ಸಂಗ್ಮಾ ಅವರ ಸಾವು ಬಹಳ ನೋವು ತಂದಿದೆ. ಇಂತಹ ಕೃತ್ಯಗಳನ್ನು ಸಹಿಸಲು ಅಸಾಧ್ಯ. ದಾಳಿಕೋರರನ್ನು ಬಂಧಿಸಿ, ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.