ಲವ್ ಜಿಹಾದ್ ನ ಬಲಿಪಶು ಎಂದು ಹೇಳಲಾಗುತ್ತಿರುವ ಕೇರಳದ ಹಾದಿಯಾ ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಸ್ವಇಚ್ಛೆಯಿಂದಲೇ ಮತಾಂತರವಾಗಿದ್ದು, ಮುಸ್ಲಿಮಳಾಗಿ ಪತಿಯೊಂದಿಗೇ ಇರುತ್ತೇನೆ
ನವದೆಹಲಿ: ಲವ್ ಜಿಹಾದ್ ನ ಬಲಿಪಶು ಎಂದು ಹೇಳಲಾಗುತ್ತಿರುವ ಕೇರಳದ ಹಾದಿಯಾ ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಸ್ವಇಚ್ಛೆಯಿಂದಲೇ ಮತಾಂತರವಾಗಿದ್ದು, ಮುಸ್ಲಿಮಳಾಗಿ ಪತಿಯೊಂದಿಗೇ ಇರುತ್ತೇನೆ ಎಂದು ಹೇಳಿದ್ದಾರೆ.
ಸ್ವಇಚ್ಛೆಯಿಂದಲೇ ಶಫಿನ್ ಜಹಾನ್ ನ್ನು ವಿವಾಹವಾಗಿದ್ದು, ಆತನ ಪತ್ನಿಯಾಗಿಯೇ ಇರುವುದಕ್ಕೆ ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಗೆ ಹಾದಿಯಾ ಮನವಿ ಮಾಡಿದ್ದಾರೆ. " ನನ್ನ ಪತಿಯನ್ನು ಎನ್ಐಎ ತಪ್ಪಾಗಿ ಭಯೋತ್ಪಾದಕನೆಂದು ಬಿಂಬಿಸುತ್ತಿದೆ ಐಎಸ್ಐಎಸ್ ಗೂ ಆತನಿಗೂ ಯಾವುದೇ ರೀತಿಯ ಸಂಬಂಧವಿಲ್ಲ" ಎಂದು ಹಾದಿಯಾ ಹೇಳಿದ್ದಾರೆ.
ಕೇರಳ ಹೈಕೋರ್ಟ್ ಹಾದಿಯಾ ಹಾಗೂ ಜಹಾನ್ ನ ವಿವಾಹವನ್ನು ಅಸಿಂಧುಗೊಳಿಸಿ ಹಾದಿಯಾಳನ್ನು ಪೋಷಕರೊಂದಿಗೆ ತೆರಳಲು ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ವಿದ್ಯಾಭ್ಯಾಸ ಮುಂದುವರೆಸುವುದಕ್ಕಾಗಿ ಕಳೆದ ವರ್ಷದ ನವೆಂಬರ್ 27 ರಂದು ಹಾದಿಯಾಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.