ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದೆಹಲಿ ಮುಖ್ಯ ಕಾರ್ಯದರ್ಶಿ ಮೇಲೆ ಆಪ್ ಶಾಸಕರ ಹಲ್ಲೆ: ಕೇಜ್ರಿವಾಲ್ ನಿವಾಸದಲ್ಲಿ ಪೊಲೀಸರಿಂದ ಸಾಕ್ಷ್ಯ ಸಂಗ್ರಹ

ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕರು ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ...
ನವದೆಹಲಿ: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕರು ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಎಂ ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿರುವ ದೆಹಲಿ ಪೊಲೀಸರು  ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲಿನ ಆಪ್ ಶಾಸಕರಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದು, ಇದಕ್ಕಾಗಿ ಉತ್ತರ ದೆಹಲಿ  ಹೆಚ್ಚುವರಿ ಪೊಲೀಸ್ ಸಹಾಯಕ ಆಯುಕ್ತ ಹರಿಂದರ್ ಸಿಂಗ್ ನೇತೃತ್ವದ ಪೊಲೀಸ್ ತಂಡ ಘಟನೆ ನಡೆದ ಸಿಎಂ ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿದ್ದಾರೆ. ಸುಮಾರು 60-70 ಪೊಲೀಸ್ ಸಿಬ್ಬಂದಿ ಕೇಜ್ರಿವಾಲ್ ನಿವಾಸಕ್ಕೆ  ಆಗಮಿಸಿದ್ದು, ಕೇಜ್ರಿವಾಲ್ ನಿವಾಸದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. 
ಈ ಬಗ್ಗೆ ಸ್ವತಃ ದೆಹಲಿ ಸರ್ಕಾರದ ವಕ್ತಾರ ಅರುಣೋದಯ್ ಪ್ರಕಾಶ್ ಅವರು ಮಾಹಿತಿ ನೀಡಿದ್ದು, ಭಾರಿ ಪ್ರಮಾಣದ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಸಿಎಂ ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿದ್ದಾರೆ. ಆದರೆ ಈ ವೇಳೆ  ಪೊಲೀಸರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದು, ಸಿಎಂ ನಿವಾಸಕ್ಕೆ ಆಗಮಿಸುವಾಗ ಒಂದು ಮಾಹಿತಿ ಕೂಡ ನೀಡದೇ ನಿವಾಸಕ್ಕೆ ಆಗಮಿಸಿ ಸಾಕ್ಷ್ಯಾಧಾರ ಸಂಗ್ರಹಿಸುತ್ತಿದ್ದಾರೆ. ಪ್ರಜೆಗಳ ಮುಖಾಂತರ ಆಯ್ಕೆಯಾದ ಮುಖ್ಯಮಂತ್ರಿಗೆ  ಪೊಲೀಸರು ನೀಡುವ ಗೌರವ ಇದೇ ಏನು ಅರುಣೋದಯ್ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತೆಯೇ ಈ ಬಗ್ಗೆ ಟ್ವೀಟ್ ನಲ್ಲೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ಮಂಗಳವಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ್ದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಆಪ್ ಶಾಸಕರು ಹಲ್ಲೆ ಮಾಡಿದ್ದರು. ಜಾಹಿರಾತು ನೀಡಿಕೆ ಸಂಬಂಧ ಅಂಶು ಪ್ರಕಾಶ್ ಅವರ  ವಿರುದ್ಧ ಆಕ್ರೋಶಗೊಂಡಿದ್ದ ಶಾಸಕರು ಅವರ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಅಂಶು ಪ್ರಕಾಶ್ ಅವರ ತುಟಿಗೆ ಗಾಯವಾಗಿತ್ತು. ಈ ಬಗ್ಗೆ ಅಂಶು ಪ್ರಕಾಶ್ ಅವರು ದೆಹಲಿ ಲೆಫ್ಟೆನೆಂಟ್ ಗವರ್ನರ್ ಹಾಗೂ ದೆಹಲಿ ಪೊಲೀಸ್  ಆಯುಕ್ತರಿಗೆ ದೂರು ನೀಡಿದ್ದರು. ದೂರಿನಲ್ಲಿ ಆಪ್ ಶಾಸಕರಾದ ಪ್ರಕಾಶ್ ಜರ್ವಾಲ್, ಅಮಾನತ್ತುಲ್ಲಾಖಾನ್ ಅವರ ಹೆಸರುಗಳನ್ನು ಉಲ್ಲೇಖ ಮಾಡಿದ್ದರು.
ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಆಪ್ ಶಾಸಕ ಪ್ರಕಾಶ್ ಜರ್ವಾಲ್ ಅವರನ್ನು ಬಂಧಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com